ಮಂಗಳೂರು ಜ. 5: ದೇವರು ಮನುಕುಲವನ್ನು ಅತೀವವಾಗಿ ಪ್ರೀತಿಸುತ್ತಾರೆ. ದೇವರು ಹಾಗೂ ಮನುಜನ ನಡುವಿನ ಸಂಬಂಧ ಪವಿತ್ರವಾಗಿದೆ. ದೇವರು ಆರಂಭದಿಂದಲೂ ಮನುಕುಲದಲ್ಲಿ ತಮ್ಮ ವಿಶ್ವಾಸವನ್ನು ಉಳಿಸಿಕೊಂಡಿದ್ದಾರೆ. ಅವರ ಪುತ್ರ ಯೇಸು ಕ್ರಿಸ್ತರನ್ನು ಜಗತ್ತಿಗೆ ಸಮರ್ಪಿಸಿದರು. ಅವರ ಮೂಲಕ ನಮ್ಮನ್ನು ದೇವರೆಡೆಗೆ ಕೊಂಡೊಯ್ಯಲು ಮಾರ್ಗವನ್ನು ಸಿದ್ದಗೊಳಿಸಿದ್ದಾರೆ ಎಂದು ಬರೇಲಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ। ವಂ। ಇನ್ನೇಶಿಯಸ್ ಡಿ’ಸೋಜಾ ಹೇಳಿದರು.

ಬಿಕರ್ನಕಟ್ಟೆ ಬಾಲಯೇಸು ಪುಣ್ಯಕ್ಷೇತ್ರದಲ್ಲಿ ಸೋಮವಾರ ಆರಂಭಗೊಂಡ ಮೊದಲ ದಿನದ ನೊವೆನಾ ಪ್ರಾರ್ಥನೆಯಲ್ಲಿ ಭಾಗವಹಿಸಿ ಬಲಿಪೂಜೆ ನೆರವೇರಿಸಿ ಆಶೀರ್ವಚನ ನೀಡಿ ದರು. ಯೇಸು ಕ್ರಿಸ್ತರು ತ್ಯಾಗದಿಂದ ಇಂದು ಪವಿತ್ರಸಭೆ ಜೀವಂತವಾಗಿದೆ ಎಂದರು.
ಪವಿತ್ರ ಸಭೆಯೊಂದಿಗೆ ನಾವು ವಿಶ್ವಾಸಿಗಳಾಗಿರಬೇಕು. ದೇವರ ವಿಶ್ವಾಸ ಶಾಶ್ವತವಾಗಿದೆ. ದೇವರು ಪ್ರೀತಿಸುವ ಮಕ್ಕಳು ನಾವಾಗಿದ್ದು, ದೇವರಿಂದ ಆಶೀರ್ವಾದ ಆಪೇಕ್ಷಿಗಳಾಗಿದ್ದೇವೆ. ನಾವು ಆಚರಿಸುವ ಬಲಿಪೂಜೆ ನಾವು ಹಾಗೂ ದೇವರು, ಪವಿತ್ರ ಸಭೆಯ ನಡುವಿನ ಸಂಬಂಧವನ್ನು ದೃಢಗೊಳಿಸುತ್ತದೆ ಎಂದರು.
ಬಾಲಯೇಸು ಗುರುಮಠದ ಮುಖ್ಯಸ್ಥ ವಂ। ಮೆಲ್ವಿನ್ ಡಿ ಕುನ್ಹಾ ಬಾಲಯೇಸು ಪುಣ್ಯಕ್ಷೇತ್ರದ ನಿರ್ದೇಶಕ ವಂ। ಸ್ಟೀಫನ್ ಪಿರೇರಾ ಸಹಿತ ಇತರ ಧರ್ಮಗುರುಗಳು ಬಲಿಪೂಜೆಯಲ್ಲಿ ಭಾಗವಹಿಸಿದ್ದರು.