ಮಂಗಳೂರು ಆ 12: ವಿಶ್ವದಾದ್ಯಂತ ದೇಶವೊಂದಕ್ಕೆ ಒಂದೇ ಭಾಷೆಯಿರುವಾಗ ಭಾರತ ಭೂಖಂಡದಲ್ಲಿ ಸಾವಿರಾರು ಭಾಷೆ – ಸಾಹಿತ್ಯ – ಸಂಸ್ಕೃತಿಗಳಿಗೆ ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ. ಪುಸ್ತಕ ಮಾತ್ರವಲ್ಲ ಮೌಖಿಕ ಸಾಹಿತ್ಯವೂ ಇದೆ. ಇಪ್ಪತನಾಲ್ಕು ಭಾಷೆಗಳಲ್ಲಿನ ಉತ್ತಮ ಸಾಹಿತ್ಯ ಗುರುತಿಸಿ ಪ್ರಕಟಿಸುವುದು, ಒಂದು ಭಾಷೆಯಿಂದ ಇನ್ನೊಂದಕ್ಕೆ ಅನುವಾದ ಮಾಡಿ ಪ್ರಕಟಿಸುವುದು ಸುಲಭದ ಕೆಲಸವಲ್ಲ. ಕೇಂದ್ರ ಸಾಹಿತ್ಯ ಅಕಾಡೆಮಿಯಿ ಇದನ್ನು ಹಲವಾರು ದಶಕಗಳಿಂದ ಮಾಡುತ್ತಾ ಬಂದಿದೆ. ಭಾರತೀಯ ಸಾಹಿತ್ಯದ ನಿರ್ಮಾತೃರು ಎಂಬ ಸರಣಿ ಪುಸ್ತಕಗಳನ್ನು ಓದಿದರೆ ಕಾಲಮಾನದ ಆಚೆಗಿನ ಸಾಮಾಜಿಕ ಪರಿಸ್ಥಿತಿಗಳನ್ನು ಯೋಚಿಸಲು ಸಾಧ್ಯವಾಗುತ್ತದೆ. ಸಾಹಿತ್ಯದ ಶಕ್ತಿಗೆ ಬೇರೆ ಪರ್ಯಾಯ ಇಲ್ಲ” ಎಂದು ಸಂತ ಎಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಭಾಷಾ ನಿಖಾಯದ ಮುಖ್ಯಸ್ಥ ಪ್ರೊ| ಡಾ| ಮಹಾಲಿಂಗ ಭಟ್ ಅಭಿಪ್ರಾಯಪಟ್ಟರು. ಡಾ| ಭಟ್ ಕೊಂಕಣಿ ಸಾಹಿತಿ ವಿ.ಜೆ.ಪಿ. ಸಲ್ಡಾನ್ಹಾ ಜನ್ಮಶತಾಬ್ದಿಯ ಸಲುವಾಗಿ ಸಾಹಿತ್ಯ ಅಕಾಡೆಮಿ, ಹೊಸದಿಲ್ಲಿ, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕೊಂಕಣಿ ಸಂಸ್ಥೆ, ವಿಶನ್ ಕೊಂಕಣಿ ಹಮ್ಮಿಕೊಂಡಿರುವ ಎರಡು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಅಂಗವಾಗಿ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಆಯೋಜಿಸಿರುವ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಮಾತಾನಾಡುತ್ತಿದ್ದರು.
ಮಂಗಳವಾರ ಆಗಸ್ಟ್ 12 ರಿಂದ ಗುರುವಾರ 14 ರ ವರೆಗೆ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಬೆಳಿಗ್ಗೆ 10.00 ರಿಂದ ಸಾಯಂಕಾಲ 6.00 ರ ವರೆಗೆ ಪುಸ್ತಕ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ವಿಶೇಷ ರಿಯಾಯತಿ ದರದಲ್ಲಿ ಪುಸ್ತಕಗಳು ಮಾರಾಟಕ್ಕಿವೆ. ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆ, ಸಂಘ – ಸಂಸ್ಥೆಗಳ ಗ್ರಂಥಾಲಯಗಳಿಗೆ ವಿಶೇಷ ರಿಯಾಯತಿ ಇದೆ. ಕನ್ನಡ, ಕೊಂಕಣಿ, ಮಲಯಾಳಮ್, ಇಂಗ್ಲಿಶ್, ಹಿಂದಿ, ಮರಾಟಿ ಹೀಗೆ ಆರು ಭಾಷೆಗಳ 350 ಕ್ಕೂ ಹೆಚ್ಚು ಟೈಟಲ್ ಗಳು ಮಾರಾಟಕ್ಕಿವೆ.