canaratvnews

ಸುಳ್ಯದಲ್ಲಿ ಮನೆಗಳ್ಳತನ ಪ್ರಕರಣ – ಇಬ್ಬರು ಆರೋಪಿಗಳ ಬಂಧನ, 5 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಸುಳ್ಯ: ಸಾಲದ ಹಣ ಹಿಂತಿರುಗಿಸುವ ನೆಪದಲ್ಲಿ ಮನೆಗೆ ಬಂದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಪ್ರಕರಣವನ್ನು ಸುಳ್ಯ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಅವರಿಂದ ಕಳವು ಮಾಡಲಾದ ಸಂಪೂರ್ಣ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಘಟನೆಯ ಹಿನ್ನೆಲೆ:ಸುಳ್ಯ ಕಸಬಾ ನಿವಾಸಿ ಪುಣ್ಯಶ್ರೀ (20) ಎಂಬುವವರು ನೀಡಿದ ದೂರಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ದೂರುದಾರರ ತಂದೆಯ ಪರಿಚಯಸ್ಥರಾಗಿದ್ದ ಆರೋಪಿತೆ ಶೃತಿ @ ವಿಶ್ಮೀತ (37) ಎಂಬಾಕೆ ಅವರ ಬಳಿ ಸುಮಾರು 6 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಈ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ, ಒಪ್ಪಿಕೊಂಡ ಆಕೆಯು ದಿನಾಂಕ 07.04.2026 ರಂದು ಪುಣ್ಯಶ್ರೀ ಅವರ ಮನೆಗೆ ಬಂದಿದ್ದರು.ಅದೇ ದಿನ ಮನೆಯವರು ಕೆಲಸಕ್ಕೆ ತೆರಳಿದ ಸಂದರ್ಭವನ್ನು ಬಳಸಿಕೊಂಡ ಆರೋಪಿತೆಯು, ಕಪಾಟಿನಲ್ಲಿದ್ದ ಸುಮಾರು 5,00,000/- ರೂ. ಮೌಲ್ಯದ 62.5 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ರಾತ್ರಿ ವೇಳೆ ಕಪಾಟಿನ ಬೀಗದ ಕೀ ಬಿದ್ದಿರುವುದನ್ನು ಗಮನಿಸಿದ ಮನೆಯವರು ಪರಿಶೀಲಿಸಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

ತನಿಖೆ ಮತ್ತು ಬಂಧನ:ಘಟನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 49/2026 ರಂತೆ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಲಂ 331(3) ಮತ್ತು 305 ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮುಖ್ಯ ಆರೋಪಿ ಶೃತಿ @ ವಿಶ್ಮೀತ ಮತ್ತು ಕೃತ್ಯಕ್ಕೆ ಸಹಕರಿಸಿದ ಪ್ರದೀಪ್ ಎಂಬಾತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಕೃತ್ಯ ಒಪ್ಪಿಕೊಂಡಿದ್ದು, ಅವರಿಂದ ಕಳವಾದ ಎಲ್ಲಾ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸುಳ್ಯ ಪೊಲೀಸರ ಈ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ

Share News
Exit mobile version