canaratvnews

ಸೂಲಿಬೆಲೆ & ಹಾರಿಕಾಗೆ ನಿರ್ಬಂಧಿಸಿದ್ದ ಪೊಲೀಸ್‌ ನೋಟಿಸ್‌ ರದ್ದುಗೊಳಿಸಿದ ಹೈಕೋರ್ಟ್‌

ಬೆಳಗಾವಿ:  ಫೆಬ್ರವರಿ 6 ಮತ್ತು 8ರಂದು ನಡೆಯಲಿರುವ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಲು ಚಕ್ರವರ್ತಿ ಸೂಲಿಬೆಲೆ ಮತ್ತು ಹಾರಿಕಾ ಮಂಜುನಾಥ್‌ಗೆ ನಿರ್ಬಂಧಿಸಿದ್ದ ಪೊಲೀಸ್‌ ನೋಟಿಸ್‌ಗಳನ್ನು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ರದ್ದುಗೊಳಿಸಿದೆ.

ಜ.22 ರಂದು ಅನುಮತಿ ನಿರಾಕರಿಸಿ ಪೊಲೀಸರು ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿ ಹಿಂದೂ ಸಮ್ಮೇಳನ ಸಮಿತಿ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

ಸೂಲಿಬೆಲೆ ಮತ್ತು ಹಾರಿಕಾ ಅವರು ಉಂಟು ಮಾಡಬಹುದಾದ ಸಮಸ್ಯೆಗೆ ಸಂಬಂಧಿಸಿದಂತೆ ಪುರಾವೆಗಳಿಲ್ಲದೆ, ಅವರ ವಿರುದ್ಧ ಕೆಲವು ಪ್ರಕರಣ ದಾಖಲಾಗಿವೆ ಎಂದು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡುವುದನ್ನು ನಿಷೇಧಿಸಲು ಸಾಧ್ಯವಿಲ್ಲ. ಪೊಲೀಸರು ಮಾಡಿರುವ ಆದೇಶವು ಸಕಾರಣಗಳನ್ನು ಹೊಂದಿಲ್ಲ. ಈ ರೀತಿಯಲ್ಲಿ ಜನರ ಮೂಲಭೂತ ಹಕ್ಕುಗಳನ್ನು ಪೊಲೀಸರು ಕಸಿಯಲಾಗದು. ಅರ್ಜಿದಾರರ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದ ಮಾತ್ರಕ್ಕೆ ಪೊಲೀಸರು ಸಮ್ಮೇಳದಲ್ಲಿ ಅರ್ಜಿದಾರರು ಭಾಗವಹಿಸದಂತೆ ನಿರ್ಬಂಧಿಸಲಾಗದು” ಎಂದು ಪೀಠ ವಿವರಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಈ ಹಿಂದೆ ಅರ್ಜಿದಾರರು ಇಂಥ ಐದು ಸಮ್ಮೇಳನಗಳಲ್ಲಿ ಭಾಗವಹಿಸಿದ್ದು, ಯಾವುದೇ ತೆರನಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಾಗಿಲ್ಲ. ಅರ್ಜಿದಾರರಿಗೆ ಪ್ರತಿಕ್ರಿಯಿಸಲು ಅವಕಾಶ ನೀಡದೇ ಆಕ್ಷೇಪಾರ್ಹವಾದ ಆದೇಶಗಳನ್ನು ಪೊಲೀಸರು ಹೊರಡಿಸಿದ್ದಾರೆ” ಎಂದು ವಾದಿಸಿದ್ದರು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಜೆ ಎಂ ಗಂಗಾಧರ್‌ ಅವರು “ಅರ್ಜಿದಾರರು ಈ ಹಿಂದೆ ಭಾಗವಹಿಸಿರುವ ಕಾರ್ಯಕ್ರಮಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಾಗಿವೆ. ಈಗ ಅರ್ಜಿದಾರರು ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದು, ಅವುಗಳನ್ನು ಪರಿಗಣಿಸಿ ಸೂಕ್ತ ಆದೇಶ ಮಾಡಲಾಗುವುದು. ಸಮಸ್ಯೆಗಳು ಉದ್ಭವಿಸುವುದನ್ನು ತಡೆಯಲು ಈ ಕ್ರಮಕೈಗೊಳ್ಳಲಾಗಿದೆ” ಎಂದಿದ್ದರು.

Share News
Exit mobile version