ಮಂಗಳೂರು: ವಿವಿಯ ಕೂಗಳತೆ ದೂರದಲ್ಲಿದ್ದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಕೊನೆಗೂ ಮಂಗಳೂರು ವಿಶ್ವವಿದ್ಯಾಲಯ ಈ ಬಾರಿಯ ಮಂಗಳೂರು ವಿವಿಯ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ.

ತನ್ನ ಒಡಲಲ್ಲೇ ಇದ್ದ ಒಬ್ಬ ಸಾಧಕನನ್ನು ಬಿಟ್ಟು ಊರ-ಪರವೂರ ವ್ಯಕ್ತಿಗಳಿಗೆ ಗೌರವ ಡಾಕ್ಟರೇಟ್ ನೀಡುತ್ತಿದ್ದ ಮಂಗಳೂರು ವಿವಿ ಕೊನೆಗೂ ಹರೇಕಳ ಹಾಜಬ್ಬರಿಗೆ ಈ ಬಾರಿ ಡಾಕ್ಟರೇಟ್ ಪ್ರದಾನ ಮಾಡಲು ಮನಸ್ಸು ಮಾಡಿದೆ. ಹರೇಕಳ ಹಾಜಬ್ಬ ಮೂರು ದಶಕಗಳ ಹಿಂದೆಯೇ ತನ್ನೂರಿಗೆ ಶಾಲೆ ಬೇಕೆಂದು ಕನಸು ಕಂಡಿದ್ದವರು. ಅದರಕ್ಕಾಗಿ ರಾಜಕೀಯ ನೇತರಾರು, ಶಿಕ್ಷಣ ಇಲಾಖೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದ್ದರು. ಹಾಜಬ್ಬರ ಪ್ರಯತ್ನದ ಫಲವಾಗಿ 1999-2000ರ ಸಾಲಿಗೆ ನ್ಯೂಪಡ್ಪುವಿಗೆ ಪ್ರಾಥಮಿಕ ಶಾಲೆ ಮಂಜೂರಾಯಿತು.
ಕಿತ್ತಳೆ ಮಾರಿ ಜೀವನ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಶಾಲೆಗಾಗಿ ಚಪ್ಪಲಿ ಸವೆಸುವುದನ್ನು ಕಂಡ ಕನ್ನಡ ದೈನಿಕದ ಹಿರಿಯ ಪತ್ರಕರ್ತ ದಿ.ಗುರುವಪ್ಪ ಬಾಳೆಪುಣಿ ಅವರು ಮೊದಲ ಬಾರಿಗೆ ಅವರನ್ನು ಜಗತ್ತಿಗೆ ಪರಿಚಯಿಸಿದರು. ಅಂದಿನಿಂದ ಹಲವು ಸಂಘ ಸಂಸ್ಥೆಗಳು ಅವರನ್ನು ಗುರುತಿಸಿ ಸನ್ಮಾನಿಸುತ್ತಿದ್ದವು. ಆದರೆ ಆ ಸನ್ಮಾನ ಸ್ವೀಕರಿಸಲು ವಿವಿಯ ಆವರಣದೊಳಗಿಂದಲೇ ಬಸ್ನಲ್ಲಿ ತೆರಳುತ್ತಿದ್ದ ಹಾಜಬ್ಬರನ್ನು ಮಂಗಳೂರು ವಿವಿಯ ಹಿಂದಿನ ಕುಲಪತಿಗಳು ಸೇರಿ ಉನ್ನತ ಶಿಕ್ಷಣ ಪಡೆದವರೆಲ್ಲರೂ ಮರೆತಿದ್ದಂತೂ ಸುಳ್ಳಲ್ಲ. 2020ರಲ್ಲಿ ಕೇಂದ್ರ ಸರ್ಕಾರವು ಅವರನ್ನು ಗುರುತಿಸಿ ಭಾರತ ಸರಕಾರ ನೀಡುವ ನಾಲ್ಕನೆಯ ಅತಿದೊಡ್ಡ ನಾಗರಿಕ ಪ್ರಶಸ್ತಿ ಆದ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿತು. ಆ ಪ್ರಶಸ್ತಿ ಸ್ವೀಕರಿಸಿ 6 ವರ್ಷಗಳು ಸಂದಬೇಕಾಯಿತು ಹಾಜಬ್ಬರಿಗೆ ಮಂಗಳೂರು ವಿವಿಯ ಗೌರವ ಡಾಕ್ಟರೇಟ್ ನೀಡಲು.

ಹಲವು ವರ್ಷಗಳಿಂದ ಮಂಗಳೂರು ವಿವಿಯ ಗೌರವ ಡಾಕ್ಟರೇಟ್ಗಳು ಹಣಕ್ಕೆ ಬಿಕರಿಯಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದವು. ಅದರಂತೆ ಪ್ರತೀ ವರ್ಷವೂ ಓರ್ವನಾದರೂ ಉದ್ಯಮಿಗೆ ಕೊಡುವ ಮೂಲಕ ಆ ಆರೋಪಗಳು ಸತ್ಯ ಎಂದು ಪುಷ್ಠಿ ನೀಡಿದ್ದವು. 2-3 ವರ್ಷಗಳಿಂದ ನಿರಂತರ ಇಂತಹ ಆರೋಪಗಳು ಕೇಳಿ ಬಂದ ಮೇಲೆ ಇದೀಗ ಮಂಗಳೂರು ವಿವಿ ತನ್ನ ಬುಡದಲ್ಲೇ ಇದ್ದ ಸಾಧಕನನ್ನು ಗೌರವಿಸಿದೆ.
ಅದರಂತೆ ಈ ಬಾರಿ ಇತ್ತೀಚೆಗೆ ನಿಧನರಾದ ಯಕ್ಷಗಾನ ರಂಗದ ದಶಾವತಾರಿ, ತೆಂಕುತಿಟ್ಟಿನ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಹಾಗೂ ದೈವ ನರ್ತಕ ರವೀಶ್ ಪಡುಮಲೆಯವರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ ಎಂದು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ ತಿಳಿಸಿದ್ದಾರೆ.
ಮಾ.28ರಂದು ಪೂರ್ವಾಹ್ನ 11ಕ್ಕೆ ವಿಶ್ವವಿದ್ಯಾನಿಲಯದ ಆವರಣದ ಮಂಗಳ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಲಿದೆ ಎಂದು ತಿಳಿಸಿದ್ದಾರೆ. ಕರ್ನಾಟಕದ ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಎಲ್ಲ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ.
ಉನ್ನತ ಶಿಕ್ಷಣ ಸಚಿವ ಹಾಗೂ ವಿವಿಯ ಸಹಕುಲಾಧಿಪತಿಯೂ ಆಗಿರುವ ಡಾ.ಎಂ.ಸಿ. ಸುಧಾಕರ್ ಉಪಸ್ಥಿತರಿರುವರು. ಸಂಸದ ಕ್ಯಾ.ಬ್ರಿಜೇಶ್ ಚೌಟ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.ಈ ಘಟಿಕೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ 162 (ಕಲಾ ನಿಕಾಯ-40, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯ-92. ವಾಣಿಜ್ಯ ನಿಕಾಯ – 25, ಶಿಕ್ಷಣ ನಿಕಾಯ – 05) ಸಂಶೋಧನಾ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ (ಪಿ.ಎಚ್.ಡಿ.) ಪಡೆಯಲಿದ್ದಾರೆ. ಇವರಲ್ಲಿ 74 (45.67%) ಮಹಿಳೆಯರು ಮತ್ತು 88 (54.32%) ಪುರುಷರು ಹಾಗೂ 11 (ಪುರುಷ-10, ಮಹಿಳೆ-01) ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಡಾಕ್ಟರೇಟ್ ಪದವಿ ಪಡೆಯಲಿರುವರು.
56 ಚಿನ್ನದ ಪದಕ ಮತ್ತು 57 ನಗದು ಬಹುಮಾನಗಳಿದ್ದು, ವಿವಿಧ ಸ್ನಾತಕ/ಸ್ನಾತಕೋತ್ತರ ಪದವಿ ಕಾರ್ಯಕ್ರಮಗಳ ಒಟ್ಟು 147 ರ್ಯಾಂಕ್ ಗಳಲ್ಲಿ ಪ್ರಥಮ ರ್ಯಾಂಕ್ ಗಳಿಸಿರುವ 69 (ಸ್ನಾತಕೋತ್ತರ ಪದವಿ- 50 ಮತ್ತು ಪದವಿ-19) ವಿದ್ಯಾರ್ಥಿಗಳಿಗೆ ರ್ಯಾಂಕ್ ಪ್ರಮಾಣ ಪತ್ರವನ್ನು ನೀಡಲಾಗುವುದು.ಇದರಲ್ಲಿ ಕಲಾ ನಿಕಾಯದ-17, ವಿಜ್ಞಾನ ಮತ್ತು ತಂತ್ರಜ್ಞಾನ ನಿಕಾಯದ-40, ವಾಣಿಜ್ಯ ನಿಕಾಯದ -08, ಶಿಕ್ಷಣ ನಿಕಾಯದ -04 ವಿದ್ಯಾರ್ಥಿಗಳಿದ್ದಾರೆ ಎಂದು ಪ್ರೊ.ಧರ್ಮ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ.ದೇವೇಂದ್ರಪ್ಪ (ಪರೀಕ್ಷಾಂಗ )ಗಣೇಶ್ ಸಂಜೀವ (ಪ್ರಭಾರ),ಹಣಕಾಸು ಅಧಿಕಾರಿ ಪಂಚಲಿಂಗಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.

