ಮಂಗಳೂರು: ಟೈಟಲ್ ನಿಂದಲೇ ಕುತೂಹಲ ಕೆರಳಿಸಿರುವ ಬಹುನಿರೀಕ್ಷಿತ “ಫುಲ್ ಮೀಲ್ಸ್” ಸಿನಿಮಾ ನ.21ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಾಯಕ ನಟರಾದ ಲಿಖಿತ್ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಸಂಗೀತ ನಿರ್ದೇಶಕ ಡಾ.ಗುರುಕಿರಣ್ ಮಾತಾಡಿ, ”ಫುಲ್ ಮೀಲ್ಸ್ ಸಿನಿಮಾ ಹೆಸರೇ ಹೇಳುವಂತೆ ಹಾಸ್ಯ, ಸುಮಧುರ ಪ್ರೇಮಕತೆ ಮತ್ತು ಮನೋರಂಜನೆಯ ಫುಲ್ ಮೀಲ್ಸ್ ಆಗಿದೆ. ಸಿನಿಮಾದ ಹಾಡುಗಳು ಮುದ ನೀಡುತ್ತಿದ್ದು ಸಿನಿಮಾವನ್ನು ಪ್ರೇಕ್ಷಕ ಇಷ್ಟಪಡಲು ಬೇಕಾದ ಎಲ್ಲ ಅಂಶಗಳು ಇದರಲ್ಲಿವೆ“ ಎಂದರು.
ಚಿತ್ರದ ಕುರಿತು:
ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾಹಂದರವನ್ನು ಹೊಂದಿರುವ ರೊಮ್ಯಾಂಟಿಕ್ ಕಾಮಿಡಿ ಚಿತ್ರ ‘ಫುಲ್ ಮೀಲ್ಸ್’ ಒಳಗೊಂಡಿದೆ. ಮನರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಚಿತ್ರವು ಒಳಗೊಂಡಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಹಾಗೂ ಚಿತ್ರದ ಹಾಡು ‘ವಾಹ್ ಏನೋ ಹವಾ’ ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಸಾಕಷ್ಟು ಜನಯಪ್ರಿಯತೆ ಗಳಿಸಿ, ಚಿತ್ರದ ಬಗ್ಗೆ ನಿರೀಕ್ಷೆ ಮೂಡುವಂತೆ ಮಾಡಿವೆ. ‘ಸಂಕಷ್ಟ ಕರ ಗಣಪತಿ’, ‘ಫ್ಯಾಮಿಲಿ ಪ್ಯಾಕ್’, ‘ಅಬ್ಬಬ್ಬ’ ಖ್ಯಾತಿಯ ಲಿಖಿತ್ ಶೆಟ್ಟಿ ರವರು ‘ಫುಲ್ ಮೀಲ್ಸ್’ ಚಿತ್ರಕ್ಕೆ ನಾಯಕರಾಗಿ ಅಭಿನಯಿಸಿದ್ದಾರೆ ಅದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಕೂಡ ವಹಿಸಿಕೊಂಡಿದ್ದಾರೆ.
ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಗಣೇಶ್ ರಾವ್, ಕೋಟೆ ಪ್ರಭಾಕರ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.