ಮಂಗಳೂರಿನ ಪ್ರತಿಷ್ಠಿತ ಸೈಂಟ್ ಎಲೋಶಿಯಸ್ ಕಾಲೇಜಿನಲ್ಲಿ 2007 ರಿಂದ 2017 ರವರೆಗೆ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದ 68 ವರ್ಷ ಪ್ರಾಯದ ವಂದನೀಯ ಫಾದರ್ ಸ್ವೀಬರ್ಟ್ ಡಿಸಿಲ್ವ ಎಸ್.ಜೆ.ಯವರು ಇಂದು ನವೆಂಬರ್ 20ರಂದು ಗುರುವಾರ ಬೆಂಗಳೂರಿನ ಸೈಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಇವರು ಮಂಗಳೂರು ಸೈಂಟ್ ಎಲೋಶಿಯಸ್ ಕಾಲೇಜು ಹಾಗೂ ಇತರ ಕಾಲೇಜುಗಳಲ್ಲಿ ಶೈಕ್ಷಣಿಕ ಹಾಗೂ ಆಡಳಿತಾತ್ಮಕ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ.

ಬೆಂಗಳೂರಿನ ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದ ಮಾಜಿ ರೆಕ್ಟರ್ ಹಾಗೂ ಪ್ರೋ-ಚಾನ್ಸಲರ್ ಆಗಿದ್ದ ಇವರು, ಮೊದಲು ಸೈಂಟ್ ಜೋಸೆಫ್ ಕಾನೂನು ಕಾಲೇಜಿನ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಉಡುಪಿ ಜಿಲ್ಲೆಯ ಉದ್ಯಾವರ ಮೂಲದ ಫಾದರ್ ಡಿಸಿಲ್ವರವರು ಪ್ರಾಥಮಿಕ ಶಿಕ್ಷಣವನ್ನು ಉದ್ಯಾವರದಲ್ಲೇ ಪೂರ್ಣಗೊಳಿಸಿ, ನಂತರ ಮಂಗಳೂರಿನ ಸೈಂಟ್ ಎಲೋಶಿಯಸ್ ಕಾಲೇಜಿನಲ್ಲಿ ಬಿ.ಎಸ್ಸಿ. ಪದವಿ ಪಡೆದಿದ್ದರು. ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ಎಂ.ಎಸ್.ಸಿ., ತಂಬರಂನ ಮದ್ರಾಸ್ ಕ್ರಿಶ್ಚಿಯನ್ ಕಾಲೇಜಿನಲ್ಲಿ ಎಂ.ಫಿಲ್. ಪೂರ್ಣಗೊಳಿಸಿದರು. ಪುಣೆಯ ಜ್ಞಾನದೀಪ ವಿದ್ಯಾಪೀಠದಲ್ಲಿ ಧಾರ್ಮಿಕ ಅಧ್ಯಯನ ಹಾಗೂ ಚೆನ್ನೈನ ಸತ್ಯನಿಲಯಂ ಸೆಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದ್ದರು.
ಬೆಂಗಳೂರಿನ ಅರುಪೇ ನಿವಾಸ್‌ನ ನಿರ್ದೇಶಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ಫಾದರ್ ಸ್ವೀಬರ್ಟ್ ಡಿಸಿಲ್ವರವರನ್ನು ಪ್ರಭಾವಿ ಶಿಕ್ಷಣ ತಜ್ಞರಾಗಿ ಪರಿಗಣಿಸಲಾಗುತ್ತಿತ್ತು.
ಇವರ ಅಂತ್ಯಕ್ರಿಯೆಯು ನವೆಂಬರ್ 22ರಂದು ಶನಿವಾರ ಮಧ್ಯಾಹ್ನ 03.00 ಗಂಟೆಗೆ ಬೆಂಗಳೂರಿನ ಸೈಂಟ್ ಜೋಸೆಫ್ ಯೂನಿವರ್ಸಿಟಿ ಮೈದಾನದಲ್ಲಿ ನಡೆಯಲಿದೆ. ನಂತರ ಅಂತ್ಯಸಂಸ್ಕಾರ ಮೌಂಟ್ ಸೈಂಟ್ ಜೋಸೆಫ್ ಬೆಂಗಳೂರು ಇಲ್ಲಿರುವ ಜೆಸ್ವಿಟ್ ಸಮಾಧಿ ಪ್ರದೇಶದಲ್ಲಿ ನೆರವೇರಿಸಲಾಗುತ್ತದೆ.


