canaratvnews

ವಂ. ಫಾ ಫೆಲಿಕ್ಸ್ ಲಿಯೋ ಪಿಂಟೊ ನಿಧನ

ಬಂಟ್ವಾಳ : ಅಸ್ಸಾಂ ರಾಜ್ಯದ ಬೊಂಗ್ಯಗಾಂವ್ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ನಿವಾಸಿ ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ (57) ಅವರು ಅಸೌಖ್ಯದಿಂದ ಡಿಸೆಂಬರ್ 30ರಂದು ಮುಂಜಾನೆ ನಿಧನ ಹೊಂದಿದರು.

ಅವರ ನಿಧನದ ಸುದ್ದಿ ಸೂರಿಕುಮೇರು ಸೇರಿದಂತೆ ಧಾರ್ಮಿಕ ವಲಯದಲ್ಲಿ ತೀವ್ರ ದುಃಖ ಮತ್ತು ಶೋಕವನ್ನುಂಟು ಮಾಡಿದೆ.

ಬೊನವೆಂಚರ್ ಪಿಂಟೊ ಮತ್ತು ಆಲಿಸ್ ಪಿಂಟೊ ದಂಪತಿಯ ಪುತ್ರರಾಗಿ 1968ರ ಫೆಬ್ರವರಿ 28ರಂದು ಜನಿಸಿದ ಫೆಲಿಕ್ಸ್ ಲಿಯೋ ಪಿಂಟೊ ಅವರು, ಬಾಲ್ಯದಿಂದಲೇ ಧಾರ್ಮಿಕತೆ, ಶಿಸ್ತು ಹಾಗೂ ಸೇವಾಭಾವವನ್ನು ತಮ್ಮ ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡಿದ್ದರು. ಧಾರ್ಮಿಕ ಸೇವೆಯನ್ನು ಆರಿಸಿಕೊಂಡ ಅವರು 2003ರ ಮೇ 1ರಂದು ಗುರುದೀಕ್ಷೆ ಪಡೆದಿದ್ದರು. ಬಳಿಕ ಬೊಂಗೈಗಾಂವ್ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಅನೇಕ ವರ್ಷಗಳ ಕಾಲ ನಿಷ್ಠೆಯಿಂದ ಜನರ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದ್ದರು.

ಸರಳ ಸ್ವಭಾವ, ಮೃದು ಮಾತು, ಪ್ರೀತಿ ಮತ್ತು ಜನರ ಬಗೆಗಿನ ಕಾಳಜಿಯ ವ್ಯಕ್ತಿಯಾಗಿದ್ದ ಅವರು ಫಾದರ್ ಫೆಲಿಕ್ಸ್ ಪಿಂಟೊ ಅವರು, ಧರ್ಮೋಪದೇಶ, ಸಮಾಜಸೇವೆ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಅನೇಕ ವಿಶ್ವಾಸಿಗಳಿಗೆ ಮಾರ್ಗದರ್ಶಕರಾಗಿದ್ದರು. ಅವರು ಸೇವೆ ಸಲ್ಲಿಸಿದ ಪ್ರತಿಯೊಂದು ಸ್ಥಳದಲ್ಲಿಯೂ ತಮ್ಮ ವಿನಮ್ರತೆ ಹಾಗೂ ಆತ್ಮೀಯತೆಯಿಂದ ಜನಾನಿರಾಗಿಯಾಗಿದ್ದರು. ಮೃತರು ತಂದೆ ಬೊನವೆಂಚರ್ ಪಿಂಟೊ, ಸಹೋದರ ವಿಕ್ಟರ್ ಪಿಂಟೊ, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಫಾದರ್ ಫೆಲಿಕ್ಸ್ ಪಿಂಟೊ ಅವರ ನಿಧನಕ್ಕೆ ಸೂರಿಕುಮೇರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಹಾಗೂ ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷ ಎಲಿಯಾಸ್ ಪಿರೇರಾ, ಮಾಜಿ ಅಧ್ಯಕ್ಷ ತೊಮಸ್‌ ಲಸ್ರಾದೊ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. “ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರ ಸೇವಾಮಯ ಜೀವನ ಸದಾ ಸ್ಮರಣೀಯ” ಎಂದು ಅವರುಗಳು ಶ್ರದ್ದಾಂಜಲಿ ಅರ್ಪಿಸಿದ್ದಾರೆ.

ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರ ಅಂತಿಮ ವಿಧಿವಿಧಾನವು 2026ರ ಜನವರಿ 1ರಂದು ಗುರುವಾರ ಸಂಜೆ 3:30 ಗಂಟೆಗೆ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್‌ ಚರ್ಚ್‌ನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Share News
Exit mobile version