canaratvnews

ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 25 ಲಕ್ಷ ರೂ ವೆಚ್ಚದ ವಿವೇಕ ಕೊಠಡಿಯ ಗುದ್ದಲಿ ಪೂಜೆ

ಮಂಗಳೂರು ಜುಲೈ 19 ಮಂಗಳೂರಿನ ರಥಬೀದಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 25 ಲಕ್ಷ ರೂ ವೆಚ್ಚದ ವಿವೇಕ ಕೊಠಡಿಯ ಗುದ್ದಲಿ ಪೂಜೆ ಹಾಗೂ ನೂತನ ವಿವೇಕ ಕೊಠಡಿಯ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು.

ನಂತರ ಮಾತನಾಡಿದ ಶಾಸಕರು, 2022-23ನೇ ಸಾಲಿನ ವಿವೇಕ ಯೋಜನೆಯ ಕೊಠಡಿಗಳು ಇದಾಗಿದೆ. ಈ ಕಾಲೇಜಿನ ವಿಜ್ಞಾನ ಪ್ರಯೋಗ ಶಾಲೆಯ ಉನ್ನತೀಕರಣಕ್ಕೆ ಬೇಡಿಕೆಯಿದ್ದು, ಎಂ.ಆರ್.ಪಿ.ಎಲ್, ಎಂ.ಸಿ.ಎಫ್ ನಂತಹ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಸಿಎಸ್ಆರ್ ಅನುದಾನದ ಮೂಲಕ ಬೇಡಿಕೆಯನ್ನು ಪೂರ್ಣ ಗೊಳಿಸಲು ಪ್ರಯತ್ನಿಸಲಾಗುವುದು.

ಇದೇ ವೇಳೆ ಕಾಲೇಜಿಗೆ ಉತ್ತಮ ಕಂಪ್ಯೂಟರ್ ಲ್ಯಾಬ್ ನ ಅಗತ್ಯತೆಯೂ ಇದ್ದು ಈ ಬಗ್ಗೆ ಇನ್ಫೋಸಿಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಬಲ್ಮಠದ ಪಿಯು ಹಾಗೂ ಡಿಗ್ರಿ ಕಾಲೇಜಿನ ಮಾದರಿಯಲ್ಲೇ ಕಂಪ್ಯೂಟರ್ ಗಳನ್ನು ಒದಗಿಸುವ ಭರವಸೆಯನ್ನು ಸಂಸ್ಥೆಯವರು ನೀಡಿದ್ದು, ಭವಿಷ್ಯದಲ್ಲಿ ಕಂಪ್ಯೂಟರ್ ಮತ್ತು ವಿಜ್ಞಾನ ಎರಡೂ ಕ್ಷೇತ್ರದಲ್ಲಿ ಈ ಕಾಲೇಜನ್ನು ಉನ್ನತೀಕರಣಗೊಳಿಸಿ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲ ಒದಗಿಸಲು ಸರ್ವ ರೀತಿಯಲ್ಲಿ ಪ್ರಯತ್ನಿಸಲಾಗುವುದು ಎಂದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ರಾಜೇಶ್ವರಿ, ಕಾಲೇಜು ಪ್ರಾಂಶುಪಾಲರಾದ ಭಾರತಿ, ನಿರಂಜನ್, ಅನುಸೂಯ, ಶ್ರೀನಿವಾಸ್, ಸೇರಿದಂತೆ ಕಾಲೇಜಿನ ಶಿಕ್ಷಕರು, ಶಿಕ್ಷಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು

Share News
Exit mobile version