ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು.
ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ ಶೆಟ್ಟಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕರಾವಳಿ ಕರ್ನಾಟಕದ ಜನತೆಯ ಆಹಾರ ಅಭಿರುಚಿಯು ಬಹಳ ವಿಶಿಷ್ಟವಾಗಿದೆ. ತಿಂಡಿ ತಿನಿಸುಗಳ ಬಗ್ಗೆ ಇಲ್ಲಿನ ಜನರ ಪ್ರೀತಿಯು ಆಹಾರ ಸಂಸ್ಕೃತಿಯನ್ನು ಎತ್ತರಕ್ಕೆ ಕೊಂಡೊಯ್ದಿದೆ. ವೈವಿಧ್ಯಮಯ ಖಾದ್ಯಗಳಿಗೆ ಕರಾವಳಿಯು ಹೆಸರುವಾಸಿಯಾಗಿದೆ ಎಂದು ಹೇಳಿದರು.
ಸ್ಟ್ರೀಟ್ ಫುಡ್ ಫೆಸ್ಟ್ ಕಾರ್ಯಕ್ರಮ ಇಂದಿನಿಂದ ಭಾನುವಾರದವರೆಗೆ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯಲಿದ್ದು, ಆಕರ್ಷಕ ತಿಂಡಿ ತಿನಿಸುಗಳು, ಚಾಟ್ಸ್, ಪಾನೀಯಗಳು, ಸಸ್ಯಹಾರ ಮತ್ತು ಮಾಂಸಾಹಾರ ಖಾದ್ಯಗಳ ಸ್ಟಾಲ್ ಗಳನ್ನು ಒಳಗೊಂಡಿದೆ. ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.