canaratvnews

ಮುತ್ತಪ್ಪ ರೈ ಮಗನ ಮೇಲೆ ಶೂಟೌಟ್‌: ರಾಕೇಶ್‌ ಮಲ್ಲಿ ಸೇರಿ ನಾಲ್ವರ ವಿರುದ್ದ FIR

ಮಂಗಳೂರು: ಭೂಗತ ಲೋಕದ ಮಾಜಿ ಡಾನ್‌ ಮುತ್ತಪ್ಪ ರೈ ಪುತ್ರನ ಮಗನ ಮೇಲೆ ನಡೆದ ಗುಂಡಿನ ದಾಳಿಗೆ ಸಂಬಂಧಿಸಿದಂತೆ, ಬಿಡದಿ ಪೊಲೀಸ್ ಠಾಣೆಯಲ್ಲಿ ಶನಿವಾರ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ರಿಕ್ಕಿ ಅವರ ಕಾರು ಚಾಲಕ ಜಿ. ಬಸವರಾಜು ನೀಡಿದ ದೂರಿನ ಮೇರೆಗೆ ಮುತ್ತಪ್ಪ ರೈಗೆ ಆಪ್ತರಾಗಿದ್ದ ರಾಕೇಶ್ ಮಲ್ಲಿ, ರೈ ಅವರ ಎರಡನೇ ಪತ್ನಿ ಅನುರಾಧ, ನಿತೇಶ್ ಎಸ್ಟೇಟ್ ಮಾಲೀಕರಾದ ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೂರಿನಲ್ಲೇನಿದೆ

ರಿಕ್ಕಿ ಅವರು ಬೆಂಗಳೂರಿನ ಸದಾಶಿವನಗರ ಮತ್ತು ಕರಿಯಪ್ಪನದೊಡ್ಡಿಯಲ್ಲಿರುವ ಮನೆಯಲ್ಲಿ ವಾಸವಾಗಿದ್ದರು. ಶುಕ್ರವಾರ ಸದಾಶಿವನಗರದ ಮನೆಯಿಂದ ಸಂಜೆ 6ರ ಸುಮಾರಿಗೆ ಹೊರಟು ಕರಿಯಪ್ಪನದೊಡ್ಡಿ ಮನೆಗೆ ರಾತ್ರಿ 7ರ ಸುಮಾರಿಗೆ ತಲುಪಿದೆವು.

ಕೆಲ ಹೊತ್ತು ವಿಶ್ರಾಂತಿ ಪಡೆದ ಬಳಿಕ, ರಾತ್ರಿ 11ರ ಸುಮಾರಿಗೆ ಮನೆಯಿಂದ ಬೆಂಗಳೂರಿಗೆ ಹೊರಡಲು ಸಿದ್ಧವಾದೆವು.ಕಪ್ಪು ಬಣ್ಣದ ಫಾರ್ಚ್ಯೂನರ್ ಕಾರಿನಲ್ಲಿ ನಾನು, ರಿಕ್ಕಿ ರೈ ಹಾಗೂ ಅಂಗರಕ್ಷಕ ರಾಜ್‌ಪಾಲ್ ಮೂವರೂ ಹೊರಟೆವು.

ಮಗ ರಿಕ್ಕಿ ರೈ ಜೊತೆ ಮುತ್ತಪ್ಪ ರೈ

ಮನೆ ಕಾಂಪೌಂಡ್‌ನಿಂದ ಅನತಿ ದೂರಕ್ಕೆ ಬಂದಾಗ ಟಪ್ ಎಂಬ ಶಬ್ದ ಕೇಳಿತು. ಟೈಯರ್‌ನಲ್ಲಿ ಸಮಸ್ಯೆ ಇರಬೇಕೆಂದು ಕಾರು ನಿಲ್ಲಿಸಿ ಪರಿಶೀಲಿಸಿದಾಗ ಎಲ್ಲವೂ ಸರಿ ಇತ್ತು. ಬಳಿಕ ಅಲ್ಲಿಂದ ಹೊರಟು ರೈಲ್ವೆ ಕ್ರಾಸ್‌ವರೆಗೆ ಬಂದಾಗ ರಿಕ್ಕಿ ಅವರು ತನ್ನ ಪರ್ಸ್ ಮರೆತಿರುವುದಾಗಿ ಹೇಳಿದರು.

ಕಾರನ್ನು ಮತ್ತೆ ಮನೆಗೆ ಹಿಂದಿರುಗಿಸಿದೆವು.ಮನೆಗೆ ಬಂದ ಒಂದೂವರೆ ತಾಸಿನ ಬಳಿಕ ಮಧ್ಯರಾತ್ರಿ 12.50ಕ್ಕೆ ಮತ್ತೆ ಬೆಂಗಳೂರಿಗೆ ಹೊರಟೆವು. ಕಾರು ಕಾಂಪೌಂಡ್ ದಾಟಿ ಸ್ವಲ್ಪ ಮುಂದಕ್ಕೆ ಬಂದಾಗ,

ಹಿಂದೆ ಟಪ್ ಎಂದು ಶಬ್ದ ಕೇಳಿದ ಜಾಗದಲ್ಲೇ ಏಕಾಏಕಿ ಗುಂಡಿನ ದಾಳಿ ನಡೆಯಿತು. ನನಗೆ ತಪ್ಪಿದ ಗುಂಡು ಹಿಂದೆ ಕುಳಿತಿದ್ದ ರಿಕ್ಕಿ ಅವರ ಮೂಗು ಮತ್ತು ಬಲತೋಳಿಗೆ ತಗುಲಿ ರಕ್ತ ಸೋರತೊಡಗಿತು.

ಕೂಡಲೇ ನಾನು ಕೆಳಕ್ಕಿಳಿದು ಕಾರಿನ ಡೋರ್ ತೆರೆದು ನೋಡಿದಾಗ, ರಿಕ್ಕಿ ಅವರ ಮೂಗು ಛಿದ್ರವಾಗಿ ಮುಖ ರಕ್ತಮಯವಾಗಿತ್ತು. ಕೂಡಲೇ ನನ್ನ ಶರ್ಟ್ ಬಿಚ್ಚಿ ರಕ್ತ ಸೋರಿಕೆಯಾಗದಂತೆ ತಡೆಯಲು ಯತ್ನಿಸಿದೆ.

ಬಳಿಕ, ಅದೇ ಕಾರಿನಲ್ಲಿ ರಾಜ್‌ಪಾಲ್ ಮತ್ತು ನಾನು ರಿಕ್ಕಿ ಅವರನ್ನು ಬಿಡದಿಯ ಭರತ್ ಕೆಂಪಣ್ಣ ಆಸ್ಪತ್ರೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದೆವು.

ವೈದ್ಯರ ಸೂಚನೆ ಮೇರೆಗೆ, ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ಆಂಬುಲೆನ್ಸ್‌ನಲ್ಲಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರಿಕ್ಕಿ ಅವರನ್ನು ಕರೆತಂದು ದಾಖಲಿಸಿದೆವು ಎಂದು ಬಸವರಾಜು ದೂರಿನಲ್ಲಿ ತಿಳಿಸಿದ್ದಾರೆ.

ಜೀವ ಬೆದರಿಕೆಯಲ್ಲೇ ಬದುಕುತ್ತಿದ್ದ ರಿಕ್ಕಿ

ತನಗೆ ಜೀವ ಬೆದರಿಕೆ ಇರುವುದಾಗಿ ಹೇಳುತ್ತಿದ್ದ ರಿಕ್ಕಿ ಅವರು ಅತ್ಯಂತ ಎಚ್ಚರಿಕೆಯಿಂದ ಇರುತ್ತಿದ್ದರು. ಗುಂಡಿನ ದಾಳಿ ಬಳಿಕ ಘಟನೆ ಹಿಂದೆ ರಾಕೇಶ್ ಮಲ್ಲಿ, ಅನುರಾಧ, ನಿತೇಶ್ ಶೆಟ್ಟಿ, ವೈದ್ಯನಾಥನ್ ಹಾಗೂ ಸಹಚರರು ಇರುವ ಕುರಿತು ಬಲವಾದ ಅನುಮಾನ ವ್ಯಕ್ತಪಡಿಸಿದರು. ತಂದೆ ಮುತ್ತಪ್ಪ ರೈ ಕ್ಯಾನ್ಸರ್‌ನಿಂದ ಸಾಯುವುದಕ್ಕೆ ಮುಂಚೆ, ರಾಕೇಶ್ ಮತ್ತು ಅನುರಾಧ ಅವರು ಜೀವ ಬೆದರಿಕೆ ಹಾಕಿ, ಮಾನಸಿಕವಾಗಿ ಕಿರುಕುಳ ನೀಡಿದ್ದರು. ಹಾಗಾಗಿ, ಸದಾ ಎಚ್ಚರಿಕೆಯಿಂದ ಇರುವಂತೆ ತಂದೆ ಹೇಳುತ್ತಿದ್ದರು ಎಂದು ರಿಕ್ಕಿ ಹೇಳಿದರು ಎಂದು ಬಸವರಾಜು ದೂರಿನಲ್ಲಿ ತಿಳಿಸಿದ್ದಾರೆ.

ರಿಕ್ಕಿ ವಿವಾಹಿತರಾಗಿದ್ದು, ಪತ್ನಿ ಮತ್ತು ಮಗು ವಿದೇಶದಲ್ಲಿದ್ದಾರೆ. ಕುಟುಂಬದ ಜೊತೆ ವಿದೇಶದಲ್ಲೂ ಇರುತ್ತಿದ್ದ ರಿಕ್ಕಿ, ವ್ಯವಹಾರ ಸಂಬಂಧ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಇತ್ತೀಚೆಗೆ ಬೆಂಗಳೂರಿಗೆ ಬಂದಿರುವುದನ್ನು ತಿಳಿದುಕೊಂಡಿರುವ ಆರೋಪಿಗಳು ಸಂಚು ರೂಪಿಸಿ, ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದಾರೆ ಎಂದು ಬಸವರಾಜು ದೂರಿನಲ್ಲಿ ಆರೋಪಿಸಿದ್ದಾರೆ.

Share News
Exit mobile version