ಮಂಗಳೂರು: ಸ್ಕೂಟರ್ ಸವಾರನೊಬ್ಬ ತನ್ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ, ಹೆಲ್ಮೆಟ್ ಧರಿಸದೆ ಚಲಾಯಿಸುತ್ತಿದ್ದ ವೀಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸದ್ಯ ಈ ಪ್ರಕರಣದಲ್ಲಿ ವೈರಲ್ ಆಗಿದ್ದ ಸ್ಕೂಟರ್‌ನ್ನು ಪತ್ತೆಹಚ್ಚಿದ ಮಂಗಳೂರು ನಗರ ಪೊಲೀಸರು ದಂಡ ವಿಧಿಸಿದ್ದಾರೆ.
ಮಾ.23ರಂದು ಸಂಜೆ 4 ಗಂಟೆಯಿಂದ 4:10ರ ಸಮಯಕ್ಕೆ ಬೆಂದೂರ್‌ವೆಲ್, ಕಂಕನಾಡಿ, ಪಂಪ್‌ವೆಲ್ ರಸ್ತೆಯಲ್ಲಿ ಸ್ಕೂಟರ್ ಸವಾರನೊಬ್ಬ ಸ್ಕೂಟರ್‌ನ ಹಿಂಬದಿಯ ನಂಬರ್ ಪ್ಲೇಟನ್ನು ಪ್ಲಾಸ್ಟಿಕ್ ಕವರ್‌ನಿಂದ ಮುಚ್ಚಿ ಹೆಲ್ಮೆಟ್ ಧರಿಸದೆ ತೊಕ್ಕೊಟ್ಟು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವ ವಿಡಿಯೋವನ್ನು ಸಾರ್ವಜನಿಕರೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದರು.