canaratvnews

ಮರಳು ಮತ್ತು ಕೆಂಪುಕಲ್ಲು ಅಭಾವ ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್

ಮಂಗಳೂರು ಜುಲೈ 25 : ಕಟ್ಟಡ ನಿರ್ಮಾಣ ಉದ್ಯಮ‌ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ಮಂದಿಗೆ ಬದುಕು ನೀಡಿದ್ದು, ಇದೀಗ ಕೆಂಪು ಕಲ್ಲು ಹಾಗೂ ಮರಳು ಅಭಾವದಿಂದ ಈ ಉದ್ಯಮ‌ ತತ್ತರಿಸಿದೆ. ಕಾರ್ಮಿಕರು ಸೇರಿದಂತೆ ಈ ಉದ್ಯಮ‌ ಅವಲಂಬಿಸಿದವರು ತೀವ್ರ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಜಿಲ್ಲೆಯ ಈ ಸ್ಥಿತಿಗೆ ಕಾಂಗ್ರೆಸ್ ಸರ್ಕಾರದ ಆಡಳಿತ ನೀತಿಯೇ ನೇರ ಕಾರಣ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಸ್ಪೀಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಭೆ, ಹೇಳಿಕೆಗಳಿಗೆ ಸೀಮಿತವಾಗಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆ ನಿವಾರಿಸಲು ಸಂಪೂರ್ಣ ವಿಫಲರಾಗಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳ ಮೂಲಕ ಆಡಳಿತ ನಡೆಯಬೇಕು.ಆದರೆ ಜಿಲ್ಲೆಯಲ್ಲಿ ಅಧಿಕಾರಗಳು ಮಾಡಿದ್ದೇ ಕಾನೂನು ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.

ಕಟ್ಟಡ ನಿರ್ಮಾಣ ಸ್ಥಗಿತಗೊಂಡಿರುವುದು ಜಿಲ್ಲೆಯ ಅಭಿವೃದ್ದಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಮರಳು ಮತ್ತು ಕೆಂಪುಕಲ್ಲು ಅಭಾವ ನಿವಾರಿಸಲು ಬಿಜೆಪಿ ಜಿಲ್ಲೆಯಾದ್ಯಂತ ಹೋರಾಟ ನಡೆಸಿದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಉಗ್ರ ಹೋರಾಟ ನಡೆಸುವುದು ಬಿಜೆಪಿಗೆ ಅನಿವಾರ್ಯವಾಗಲಿದೆ ಎಂದು ನಳಿನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದಾರೆ. ಕಟ್ಟಡ ನಿರ್ಮಾಣ ಉದ್ಯಮವನ್ನು ನಂಬಿಕೊಂಡಿರುವ ಸಾವಿರಾರು ಕುಟುಂಬಗಳ ಹಿತ ರಕ್ಷಣೆಗೆ ರಾಜ್ಯ ಸರ್ಕಾರ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ

Share News
Exit mobile version