ಮಂಗಳೂರು: ಕೊಂಕಣಿ ಸಂಗೀತ ಮತ್ತು ಚಳುವಳಿಯ ಮೇರು ನಕ್ಷತ್ರ ಅಸ್ತಂಗತ. ಎರಿಕ್ ಒಝೇರಿಯೊ ದಿವಂಗತ ಮಾಂಡ್ ಸೊಭಾಣ್ ಗುರಿಕಾರ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಕೊಂಕಣಿ ಚಳುವಳಿಯ ಮೇರು ನಾಯಕ ವಿಶ್ವ ಕೊಂಕಣಿ ಕಲಾರತ್ನ ಎರಿಕ್ ಅಲೆಕ್ಸಾಂಡರ್ ಒಝೇರಿಯೊ 29.08.25 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಜೊಯ್ಸ್ ಒಝೆರಿಯೊ, ಮಕ್ಕಳಾದ ಡಾ ರಶ್ಮಿ ಕಿರಣ್ ಮತ್ತು ರಿತೇಶ್ ಕಿರಣ್ ಮತ್ತು ಬಂಧುವರ್ಗ, ಮಾಂಡ್ ಸೊಭಾಣ್ ಕುಟುಂಬ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಅವರ ಅಂತಿಮ ವಿಧಿ ವಿಧಾನಗಳು 31.08.2025 ರಂದು ಭಾನುವಾರ ನಡೆಯಲಿವೆ. ಪೂರ್ವಾಹ್ನ 11.15 ಕ್ಕೆ ಸಂತ ವಿನ್ಸೆಂಟ್ ಫೆರೆರ್ ಚರ್ಚ್ ವಾಲೆನ್ಸಿಯಾ ಇಲ್ಲಿ ಅಂತಿಮ ಬಲಿಪೂಜೆ ನೆರವೇರಲಿದೆ. ಮಧ್ಯಾಹ್ನ 1.00 ಗಂಟೆಯಿಂದ 4.30 ಗಂಟೆ ತನಕ ಶಕ್ತಿನಗರದ ಕಲಾಂಗಣದಲ್ಲಿ ಸಾರ್ವಜನಿಕ ವೀಕ್ಷಣೆ ಮತ್ತು ಶ್ರದ್ಧಾಂಜಲಿ ನಡೆಯಲಿದೆ. ನಂತರ ಅಂತ್ಯಕ್ರಿಯೆ ನೆರವೇರಿಸಲು ಪಾರ್ಥಿವ ಶರೀರವನ್ನು ಬೋಳೂರು ಚಿತಾಗಾರಕ್ಕೆ ಕೊಂಡೊಯ್ಯಲಾಗುವುದು.
ಕೊಂಕಣಿಯ ಮಹತ್ವದ ಸಂಗೀತಗಾರರಾಗಿ ದುಡಿದ ಅವರು ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಹೊಸತನ ನೀಡಲು ಶ್ರಮಿಸಿದವರು. ಹಿಂದಿನ ಹಾಗೂ ಇಂದಿನ ಕವಿಗಳ ಕವಿತೆಗಳಿಗೆ ಸ್ವರ ಸಂಯೋಜಿಸಿ, ಹಾಡಿ, ಜನರೆಡೆಗೆ ತಲುಪಿಸಿ ಕೊಂಕಣಿ ಸಂಗೀತಕ್ಕೆ ಹೊಸ ಅಧ್ಯಾಯ ನೀಡಿದ ಅಭಿಜಾತ ಸ್ವರ ಮಾಂತ್ರಿಕ. ಕೊಂಕಣಿ ಕಾರ್ಯಕ್ರಮಗಳಲ್ಲಿ ಶಿಸ್ತು, ಅಭ್ಯಾಸ, ಸಮಯ ಪರಿಪಾಲನೆ ಮತ್ತು ಕಲಾವಿದರಿಗೆ ಸೂಕ್ತ ಸಂಭಾವನೆ ನೀಡಿ ವೃತ್ತಿಪರತೆ ತಂದ ಸಂಗೀತ ಸರದಾರ ಎರಿಕ್ ಒಝೇರಿಯೊ.
ಸಂಗೀತದಲ್ಲಿ ಕೊಂಕಣಿ ಸ್ವರೂಪದ ಹುಡುಕಾಟದಲ್ಲಿ 30.11.1986 ರಲ್ಲಿ ಮಾಂಡ್ ಸೊಭಾಣ್ ಸಂಗೀತ ಪ್ರಯೋಗ ಆರಂಭಿಸಿ ದೇಶ ವಿದೇಶಗಳಲ್ಲಿ ಇದರ 200 ಕ್ಕೂ ಮಿಕ್ಕಿ ಪ್ರದರ್ಶನ, 1000 ಕ್ಕೂ ಮಿಕ್ಕಿ ಕವಿತೆಗಳಿಗೆ, ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿ 800 ಕ್ಕೂ ಮಿಕ್ಕಿ ಕಾರ್ಯಕ್ರಮ ನೀಡಿ 26 ಧ್ವನಿಸುರುಳಿ/ಸಿಡಿಗಳನ್ನು ನಿರ್ಮಿಸಿ, ಶ್ರೀಮಂತ ಪರಂಪರೆಯನ್ನು ನಿರ್ಮಿಸಿದರು.
ತದನಂತರ ಮಾಂಡ್ ಸೊಭಾಣ್ ಸಂಘಟನೆ ರಚಿಸಿ, ನೋಂದಾಯಿಸಿ, ಕೊಂಕಣಿ ಜನರ ಭಾಷಾ ಅಸ್ಮಿತೆಯನ್ನು ಜಾಗೃತಗೊಳಿಸಲು, ಸಾಂಸ್ಕೃತಿಕ ಅನನ್ಯತೆಯನ್ನು ರಕ್ಷಿಸಲು, ಬೆಳೆಸಲು ದುಡಿದಿದ್ದಾರೆ. ಕಲಾಂಗಣ ಕೇಂದ್ರವನ್ನು ಜನರ ಸಹಕಾರದಲ್ಲಿ ನಿರ್ಮಿಸಿದರು. ಕೇವಲ ಕಟ್ಟಡ ಕಟ್ಟಿ ಸುಮ್ಮನೆ ಕೂರದೆ, ಸಾಂಸ್ಕೃತಿಕ ಚಲನವಲನಗಳು ನಿರಂತರವಾಗಿ ನಡೆಯುವಂತೆ ಅಗತ್ಯ ವ್ಯವಸ್ಥೆ ಮಾಡಿದರು. ಅಧ್ಯಕ್ಷ ಲುವಿ ಪಿಂಟೊ ಮತ್ತು ಸಮಿತಿಯ ಸಹಕಾರದಲ್ಲಿ ನಾಟ್ಯ, ನಾಟಕ, ಗಾಯನ ಹಾಗೂ ವಿವಿಧ ಕಲಾಪ್ರಕಾರಗಳ ಪ್ರತಿಭೆಗಳು ಅರಳಲು ಅವಕಾಶ ಮಾಡಿ ಕೊಟ್ಟರು. 35 ಪ್ರಯೋಗಗಳ 2200 ಕ್ಕೂ ಮಿಕ್ಕಿ ಪ್ರದರ್ಶನಗಳು ನಡೆದಿವೆ. ಹಲವು ಮಹತ್ವದ ಅಭಿಯಾನಗಳು, ತಿರುಗಾಟಗಳ ಮುಖಾಂತರ ಕೊಂಕಣಿ ಜನರ ಭಾಷಾಭಿಮಾನ ಹೆಚ್ಚಿಸುವ ಕೆಲಸ ನಡೆದಿದೆ. ಕೊಂಕಣಿಯ ಗಿನ್ನೆಸ್ ದಾಖಲೆ ಮಾಂಡ್ ಸೊಭಾಣ್ ಹೆಸರಲ್ಲಿದೆ.
ವಿಶ್ವದ ಪ್ರಥಮ ಬಾಯ್ಲಾ ಶೋ, ಮಾಂಡೊ ಹಬ್ಬ, ಪರಬ್, ಸಾಂತ್, ಬಾಯ್ಲಾ ಇಂಟರ್‌ನ್ಯಾಷನಲ್, ಪುನವ್, ಮಾಂಡೊ ಉತ್ಸವ, ಕೊಂಕ್ಣಿ ಮಹೋತ್ಸವ, ಕೊಂಕಣಿ ನಿರಂತರಿ, ಜಾಗತಿಕ ಕೊಂಕಣಿ ಸಂಗೀತ ಪುರಸ್ಕಾರ, ಪ್ರಥಮ ವಿಶ್ವ ಕೊಂಕಣಿ ಸಾಂಸ್ಕೃತಿಕ ಮಹೋತ್ಸವ, ಜಾಗತಿಕ ಕೊಂಕಣಿ ಸಿನೆಮಾ ಪುರಸ್ಕಾರ, ಸೋದ್ – ಗಾಯನದ ಟಿವಿ ರಿಯಾಲಿಟಿ ಶೋ ಈ ಎಲ್ಲಾ ಕಾರ್ಯಕ್ರಮಗಳ ನಿರ್ದೇಶಕರಾಗಿ ಯಶಸ್ಸಿಗೆ ಅವರು ಕಾರಣೀಕರ್ತರು. ಕೊಂಕಣಿಯ ಬ್ಲಾಕ್ ಬಸ್ಟರ್ ಸಿನೆಮಾ ಅಸ್ಮಿತಾಯ್ ಇದರ ಮೂಲಕತೆ ಇವರದ್ದು.
ರಜಾ ಶಿಬಿರಗಳ ಮುಖಾಂತರ, ತರಬೇತಿ ಹಾಗೂ ಕಾರ್ಯಾಗಾರಗಳ ಮೂಲಕ ಯುವಜನತೆ ಹಾಗೂ ಮಕ್ಕಳನ್ನು ಕೊಂಕಣಿಯೆಡೆಗೆ ಆಕರ್ಷಿಸಿ, ಪ್ರತಿಭೆಗಳಿಗೆ ನೀರೆರೆದು ಪೋಷಿಸಿ, ವೇದಿಕೆ ನೀಡಿ ಕೊಂಕಣಿ ಸಾಂಸ್ಕತಿಕ ಕ್ಷೇತ್ರಕ್ಕೆ ಭದ್ರ ಭವಿಷ್ಯ ನೀಡಲು ಅಪಾರ ಕೊಡುಗೆ ನೀಡಿದ್ದಾರೆ. ತಿಂಗಳ ವೇದಿಕೆ ಸರಣಿಯ ಮೂಲಕ ಈ ನಿರಂತರತೆಯನ್ನು ಕಾಯ್ದುಕೊಂಡು ಬರಲಾಗಿದೆ.
ಎರಿಕ್ ಒಝೇರಿಯೊ 2005-08 ಅವಧಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರಾಗಿ ನೇಮಕವಾದ ಮೇಲೆ ಕೊಂಕಣಿ ಕಾರ್ಯಕ್ರಮಗಳು ದಾಖಲೆ ಮಟ್ದದಲ್ಲಿ ನಡೆದಿವೆ. ರಾಜ್ಯಾದ್ಯಾಂತ ಕೊಂಕಣಿ ಅಕಾಡೆಮಿ ತಲುಪಿತು. ಮಹತ್ವದ ಸಾಹಿತ್ಯ ಕೃತಿಗಳು ಪ್ರಕಟಗೊಂಡವು. ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕೊಂಕಣಿ ಕಲಿಕೆ ಆರಂಭವಾಗಲು ಅವರು ಪ್ರಮುಖ ಕಾರಣ.
ಕೊಂಕಣಿ ವಿವಿಧತೆಯಲ್ಲಿ ಏಕತೆ ಹೊಂದಿದ ಭಾಷೆ. ಕುಡುಮಿ, ಸಿದ್ದಿ, ಖಾರ್ವಿ ಮತ್ತಿತರ ಕೊಂಕಣಿ ಸಮುದಾಯಗಳೊಂದಿಗೆ ಕೆಲಸ ಮಾಡಿ ಅವರ ಜಾನಪದ ಕಲೆಗಳಿಗೆ ಮುಖ್ಯವಾಹಿನಿಯಲ್ಲಿ ವೇದಿಕೆ ನೀಡಿದರು. ಗೋವಾ ಮತ್ತು ಮಂಗಳೂರು ನಡುವೆ ಸಾಂಸ್ಕೃತಿಕ ಸೇತುವೆ ನಿರ್ಮಿಸಲು ಬಹುವಾಗಿ ಶ್ರಮಿಸಿದರು.
ಜಾಗತಿಕ ಮಟ್ಟದ 145 ಸದಸ್ಯ ಸಂಸ್ಥೆಗಳ ಕೊಂಕಣಿ ಸಂಘಟನೆ ಕಟ್ಟಿ ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಿ, ಮಂಗಳೂರು ವಿಶ್ವವಿದ್ಯಾನಿಲಯದ ಸಹಕಾರದಲ್ಲಿ ಜಾಗತಿಕ ಸಮೀಕ್ಷೆ ನಡೆಸಿ ಕೊಂಕಣಿ ಭಾಷಾ ಯೋಜನೆ ರೂಪಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪ್ರಥಮ ವಿಶ್ವ ಕೊಂಕಣಿ ಸಮ್ಮೇಳನದ ಮಾರ್ಗಸೂಚಿ ನಕ್ಷೆ ರಚಿಸಿದರು̤ ಅವರು ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಟಾನದ ಸ್ಥಾಪಕ ನಿರ್ದೇಶಕರಲ್ಲಿ ಓರ್ವರು.
ಎರಿಕ್ ತಮ್ಮ ಯುವಪ್ರಾಯದ ಹಲವು ಅಮೂಲ್ಯ ವರ್ಷಗಳನ್ನು ಕಾರ್ಮಿಕರ ಏಳಿಗೆಗಾಗಿ ವ್ಯಯಿಸಿದ್ದಾರೆ. ಮಂಗಳೂರಿನ ಕೆಲ ಧಾರ್ಮಿಕ ನೇತೃತ್ವದ ಸಂಸ್ಥೆಗಳು ಶ್ರಮಿಕರ ಹಕ್ಕುಗಳನ್ನು ಮೊಟಕುಗೊಳಿಸಿದಾಗ, ನೀಡದೆ ಇದ್ದಾಗ ಕೆಂಪು ಬಾವುಟ ಹಿಡಿದು, ವಿಶಿಷ್ಟ ಪ್ರತಿಭಟನೆಗಳ ಮೂಲಕ ಹೋರಾಡಿ, ಅವರ ಹಕ್ಕುಗಳನ್ನು ಮರುಸ್ಥಾಪಿಸಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ದೇವನಾಗರಿ ಲಿಪಿಗೆ ಮಾತ್ರ ಮಾನ್ಯತೆ ನೀಡಿ ಇತರೆ ಕೊಂಕಣಿ ಲಿಪಿಗಳನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದಾಗ, ಸಾಹಿತಿಗಳ ಪರವಾಗಿ ನ್ಯಾಯಕ್ಕಾಗಿ ಹೈಕೋರ್ಟಿನಲ್ಲಿ ಐದು ವರ್ಷ ಹೋರಾಡಿದ್ದಾರೆ. ಭಾಷೆ, ಸಂಸ್ಕೃತಿ, ಪರಿಸರ, ದಮನಿತರ ಹಕ್ಕುಗಳಿಗಾಗಿ ಸದಾ ದನಿಯೆತ್ತಿದ್ದಾರೆ.
ಅವರ 3 ಜೀವನಗಾಥೆಗಳು ಪ್ರಕಟವಾಗಿವೆ. ಆಂಗ್ಲ ಭಾಷೆಯಲ್ಲಿ ರೆಡ್ & ವೈಟ್, ಮತ್ತು ’ದಿ ಇಂಡಿಫ್ಯಾಟಿಗೇಬಲ್ ಕ್ರುಸೇಡರ್’ ಹಾಗೂ ಕೊಂಕಣಿಯಲ್ಲಿ ’ಥಕಾನಾತ್‌ಲ್ಲೊ ಝುಜಾರಿ’.
ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1993), ದೊರೆತಿದೆ. ಕೊಂಕಣಿ ಜನರು ವಿಶ್ವ ಕೊಂಕಣಿ ಕಲಾರತ್ನ ಬಿರುದು ನೀಡಿದ್ದಾರೆ. ದೂರದರ್ಶನದ ‘ಸುರಭಿ’ ಕಾರ್ಯಕ್ರಮದಲ್ಲಿ ಅವರನ್ನು ದೇಶಕ್ಕೆ ಪರಿಚಯಿಸಲಾಗಿದೆ. ಭಾರತದ ಸಂಸ್ಕೃತಿ ಇಲಾಖೆಯಿಂದ ಸಿನೀಯರ್ ಫೆಲೊಶಿಫ್ ಲಭಿಸಿದೆ. ಬರ್ಪಿ ಮಿತ್ರ್ ಮಸ್ಕತ್, ಕೊಂಕಣಿ ಕುಟಾಮ್ ಬಾಹ್ರೇಯ್ನ್, ದಾಯ್ಜಿ ದುಬಾಯ್ ಮತ್ತು ಕೊಂಕಣಿ ನಾಟಕ್ ಸಭಾ ಈ ಸಂಸ್ಥೆಗಳು ಜೀವಮಾನ ಸಾಧನೆ ಪುರಸ್ಕಾರ ನೀಡಿ ಗೌರವಿಸಿದ್ದಾರೆ. ಇತರೆ ನೂರಾರು ಸನ್ಮಾನಗಳು ಲಭಿಸಿವೆ.
