ಕಡಬ: ಕೌಟುಂಬಿಕ ಕಲಹದಲ್ಲಿ ಸ್ವಂತ ಅಣ್ಣನನ್ನೇ ತಮ್ಮನೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳ ಬಜಕರೆ ಬಳಿ ರೈಲ್ವೇ ಟ್ರಾಕ್ ನಲ್ಲಿ ನಡೆದಿದೆ. ಬೆಂಕಿಯಿಂದ ಗಂಭೀರ ಗಾಯಗೊಂಡ ಅಣ್ಣ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ತಮ್ಮನನ್ನು ಮಂಗಳೂರು ವಿಭಾಗದ ರೈಲ್ವೇ ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.
ಮೃತ ವ್ಯಕ್ತಿಯನ್ನು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ನಾಗರಹಳ್ಳಿ ನಿವಾಸಿ ಹನುಮಪ್ಪ (42) ಎಂದು ಗುರುತಿಸಲಾಗಿದೆ. ಆರೋಪಿಯನ್ನು ಆತನ ತಮ್ಮ ನಿಂಗಪ್ಪ (21) ಎಂದು ಗುರುತಿಸಲಾಗಿದೆ.
ಘಟನೆ ವಿವರ:
ವಿಪರೀತ ಕುಡಿತದ ಚಟವಿದ್ದ ಮೃತ ಹನುಮಪ್ಪ, ಮನೆಯಲ್ಲಿ ಕುಡಿದು ಆಗಾಗ ಗಲಾಟೆ ಮಾಡುತ್ತಿದ್ದನು. ಆತನ ಕಾಟ ತಾಳಲಾರದೆ 14 ವರ್ಷಗಳ ಹಿಂದೆ ಆತನ ಹೆಂಡತಿ ಸಹ ಮನೆ ಬಿಟ್ಟು ಹೋಗಿದ್ದಳು. ಕೆಲ ದಿನಗಳ ಹಿಂದೆಯಷ್ಟೇ ಕುಡಿದ ಮತ್ತಿನಲ್ಲಿ ತನ್ನ ತಾಯಿಯನ್ನೇ ಕಲ್ಲಿನಿಂದ ಜಜ್ಜಿ ಕೊಲೆ ಮಾಡಲು ಈತ ಯತ್ನಿಸಿದ್ದನು.
ಇದರಿಂದ ರೋಸಿಹೋಗಿದ್ದ ತಮ್ಮ ನಿಂಗಪ್ಪ ಆತನನ್ನು ಕೊಲೆ ಮಾಡಲು ತಯಾರಿ ನಡೆಸಿದ್ದನು. ಕಳೆದ ಭಾನುವಾರ ಮಧ್ಯಾಹ್ನ ಹನುಮಪ್ಪ ಹಾಗೂ ಕುಟುಂಬ ಸಮೇತ ಊರಿಗೆ ರೈಲಿನಲ್ಲಿ ಹೊರಟಿದ್ದರು.
ಅಣ್ಣನನ್ನು ಮುಗಿಸಲು ಮೊದಲೇ ಸಂಚು ರೂಪಿಸಿದ್ದ ನಿಂಗಪ್ಪ ಕಡಬದ ಕೋಡಿಂಬಾಳ ರೈಲು ನಿಲ್ದಾಣದಲ್ಲಿ ರೈಲು ನಿಂತಾಗ ಅಣ್ಣನನ್ನು ಕೆಳಗಿಳಿಸಿದ್ದಾನೆ.ರೈಲು ಹೊರಟುಹೋದ ನಂತರ, ನಿಲ್ದಾಣದಿಂದ ಒಂದು ಕಿ.ಮೀ ದೂರದ ಕೋಡಿಂಬಾಳ ಗ್ರಾಮದ ಕೋರಿಯಾರ್ ಎಂಬಲ್ಲಿಗೆ ಕರೆದೊಯ್ದು,
ಏಕಾಏಕಿ ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಹನುಮಪ್ಪ, ಪಕ್ಕದಲ್ಲೇ ಇದ್ದ ಚರಂಡಿಗೆ ಹಾರಿ ನೀರಿನಲ್ಲಿ ಹೊರಳಾಡಿದ್ದ,ಆತನ ಚೀರಾಟ ಕೇಳಿ ಸ್ಥಳೀಯರು ಧಾವಿಸಿ ಬಂದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮೊದಲು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು.
ನಿನ್ನೆ ಬೆಳಗ್ಗೆ ಗಾಯಾಳು ಹನುಮಂತಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿದ ಇನ್ಸ್ಪೆಕ್ಟರ್ ಜಯಾನಂದ, ಎಎಸ್ಐ ಮಧುಚಂದ್ರ,ವಿಧಿವಿಜ್ಞಾನ ತಂಡ ಹಾಗೂ ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಆರಂಭದಲ್ಲಿ ಕಡಬ ಠಾಣಾ ಎಸ್.ಐ. ಅಭಿನಂದನ್ ಮತ್ತು ಸಿಬ್ಬಂದಿಳು ಆರೋಪಿಯನ್ನು ವಶಕ್ಕೆ ಪಡೆದಿದ್ದರು.