ಮಂಗಳೂರು: ಇತ್ತೀಚೆಗೆ ವಿಟ್ಲದ ಮುರುವ ಪ್ರದೇಶದಲ್ಲಿ ಭೂಮಾಲಕ ಮಹೇಶ್ ಭಟ್ ಎಂಬವನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ದಲಿತ ವರ್ಗದ ಅಪ್ರಾಪ್ತ ವಯಸ್ಸಿನ ಬಾಲಕಿ ಮನೆಗೆ ಡಿಎಚ್ಎಸ್, ಡಿವೈಎಫ್ಐ ಸಂಘಟನೆಯ ನಾಯಕರುಗಳ ನಿಯೋಗ ಭೇಟಿ ನೀಡಿ ಘಟನೆಗೆ ಸಂಬಂಧಿಸಿ ಹಲವು ಅಂಶಗಳ ಬಗ್ಗೆ ಚರ್ಚಿಸಿದೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ಧೈರ್ಯವನ್ನು ತುಂಬಿದೆ.
ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಐದಾರು ದಿನ ಕಳೆದರೂ ಆರೋಪಿ ಮಹೇಶ್ ಭಟ್ ನನ್ನು ಈವರೆಗೂ ಬಂಧಿಸಲು ಸಾಧ್ಯವಾಗದಿರುವ ಪೊಲೀಸ್ ಇಲಾಖೆಯ ಕ್ರಮ ಖಂಡನೀಯ. ಸದ್ಯ ಈ ಪ್ರಕರಣ ನಾಡಿನ ಗಮನ ಸೆಳೆದಿದೆ. ಈಗಾಗಲೇ ಹಲವು ಜನಪರ ಸಂಘಟನೆಗಳು ಘಟನೆಯನ್ನು ಖಂಡಿಸಿ ಆರೋಪಿಯ ಬಂಧನಕ್ಕೆ ಒತ್ತಾಯಿಸಿದರೂ ಈ ಬಗ್ಗೆ ಸರಕಾರ, ಜಿಲ್ಲಾಡಳಿತ ಗಮನಹರಿಸದಿರುವುದು ಖೇದಕರ.
ಸ್ಥಳೀಯ ಶಾಸಕರು ಈವರೆಗೂ ಕನಿಷ್ಟ ಸಂತ್ರಸ್ತ ಬಾಲಕಿಯ ಮನೆಗೆ ಭೇಟಿ ನೀಡುವುದಾಗಲಿ, ಈ ಬಗ್ಗೆ ಕಾಳಜಿವಹಿಸದೇ ಇರುವ ನಡೆ ಅವರ ಬಗೆಗೆ ನಿರಾಶೆಯನ್ನು ಮೂಡಿಸಿದೆ. ಆದ್ದರಿಂದ ಈ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿ ಡಿಎಚ್ಎಸ್, ಡಿವೈಎಫ್ಐ ಸಂಘಟನೆ ಮುಂದಿನ ಹಂತದ ಹೋರಾಟ ನಡೆಸುವ ತೀರ್ಮಾನ ಕೈಕೊಳ್ಳಲಿದ್ದು ಆ ಮೂಲಕ ಕುಟುಂಬದ ಜೊತೆ ಗಟ್ಟಿಯಾಗಿ ನಿಲ್ಲಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದೆ.
ನಿಯೋಗದಲ್ಲಿ ದಲಿತ ಹಕ್ಕುಗಳ ಸಮಿತಿಯ ರಾಜ್ಯ ಮುಖಂಡರಾದ ಈಶ್ವರಿ ಪದ್ಮುಂಜ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರಾದ ಕೆ ಯಾದವ ಶೆಟ್ಟಿ, ಡಿಎಚ್ಎಸ್ ಜಿಲ್ಲಾ ಮುಖಂಡರಾದ ಕೃಷ್ಣಪ್ಪ ಕೊಣಾಜೆ, ಕೃಷ್ಣ ತಣ್ಣೀರುಬಾವಿ, ರಾಧಕೃಷ್ಣ ಬೊಂಡಂತಿಲ, ಸುನೀತಾ, ಮುರುವ ಪ್ರದೇಶದ ಮುಖಂಡರಾದ ಪುಷ್ಪರಾಜ್, ವಿನಯ್, ಸುರೇಶ್ ಮುಂತಾದವರು ಉಪಸ್ಥಿತರಿದ್ದರು.