• Home  
  • ತುಳು ಅಕಾಡೆಮಿಯಿಂದ ದಾಖಲೀಕರಣ ಘಟಕ ರೂಪಿಸುವ ಯೋಜನೆ ಅಗತ್ಯವಿದೆ: ಡಾ.ವೈ.ಎನ್ ಶೆಟ್ಟಿ
- DAKSHINA KANNADA - HOME

ತುಳು ಅಕಾಡೆಮಿಯಿಂದ ದಾಖಲೀಕರಣ ಘಟಕ ರೂಪಿಸುವ ಯೋಜನೆ ಅಗತ್ಯವಿದೆ: ಡಾ.ವೈ.ಎನ್ ಶೆಟ್ಟಿ

ಮಂಗಳೂರು ಆ 02: ಭೂತಾರಾಧನೆ, ನಾಗಾರಾಧನೆ, ಯಕ್ಷಗಾನ ಸೇರಿದಂತೆ ತುಳುನಾಡಿನ ವೈಶಿಷ್ಟ್ಯತೆಗಳನ್ನು ವ್ಯವಸ್ಥಿತವಾಗಿ ದಾಖಲಿಸುವ ಕಾರ್ಯ ಆಗಬೇಕಾಗಿದ್ದು ಇದಕ್ಕಾಗಿ ತುಳು ಅಕಾಡೆಮಿಯಿಂದ ‘ದಾಖಲೀಕರಣ ಘಟಕ’ ಸ್ಥಾಪನೆ ಮಾಡುವ ಅವಶ್ಯಕತೆ ಇದೆ ಎಂದು ಹಿರಿಯ ಜಾನಪದ ವಿದ್ವಾಂಸ, ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಾ ವೈ.ಎನ್.ಶೆಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಉರ್ವಸ್ಟೋರ್ನ ತುಳುಭವನದಲ್ಲಿ ಜರಗಿದ ರಮೇಶ್ ಮಂಜೇಶ್ವರ ನಿರ್ದೇಶನದ ‘ಆಟಿದ ಬೂತಾರಾದನೆ’ ಸಾಕ್ಷ್ಯಚಿತ್ರ ಬಿಡುಗಡೆ ಮತ್ತು ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೈವಾರಾಧನೆ ಹಿಂದೆ ಸರಳವಾಗಿತ್ತು, ಆದರೆ ಈಗ ಅದನ್ನು ಸಂಕೀರ್ಣಗೊಳಿಸಲಾಗಿದೆ ಎಂಬುದನ್ನು ಹಿರಿಯ ದೈವನರ್ತಕರು ಹೇಳುತ್ತಿದ್ದಾರೆ. ಅಲ್ಲದೆ ದೈವರಾಧನೆಯಲ್ಲಿ ಬದಲಾವಣೆಗಳಾಗುತ್ತಾ ಬಂದಿವೆ. ಪ್ರಬುದ್ಧ ತುಳುಭಾಷೆಯನ್ನು ಪಾಡ್ದನ, ನುಡಿಗಟ್ಟು, ಮದಿಪು ಮೊದಲಾದವುಗಳಲ್ಲಿ ಮಾತ್ರ ಕಾಣಲು ಸಾಧ್ಯವಿದೆ. ಇಂತಹ ಮೂಲಗಳನ್ನು ಉಳಿಸಿಕೊಳ್ಳಬೇಕಾಗಿದೆ. ಈ ವಿಚಾರಗಳನ್ನು ಅಕಾಡೆಮಿಯಿಂದಲೇ ದಾಖಲೀಕರಣ ಮಾಡುವ ಜತೆಗೆ ಇತರರ ಬಳಿ ಇರುವ ದಾಖಲೆಗಳನ್ನು ಕೂಡ ಸಂಗ್ರಹಿಸುವ ಕೆಲಸವಾಗಬೇಕು ಎಂದು ಡಾ ವೈ.ಎನ್.ಶೆಟ್ಟಿ ಹೇಳಿದರು.
ಆಟಿದ ಬೂತಾರಾಧನೆ, ನೇಮದ ಬಗ್ಗೆ ಅಭಿಪ್ರಾಯ ಮಂಡಿಸಿದ ಪೆರುವಾಯಿ ಮೂವರು ದೈವಂಗಳು ದೈವಸ್ಥಾನದ ಗುರಿಕಾರ ಸುಬ್ರಹ್ಮಣ್ಯ ಭಟ್ ಕೆ.ಜೆ ಅವರು, ಆಟಿಯಲ್ಲಿ ಕೃಷಿ ಕೆಲಸ ಮುಗಿಯುವ, ಕಷ್ಟದ ಕಾಲ, ಕಷ್ಟ ದೂರ ಮಾಡಲು, ಬೆಳೆಯನ್ನು ಸಂರಕ್ಷಿಸಲು ಪಂಜುರ್ಲಿ ದೈವಕ್ಕೆ ಪ್ರಾರ್ಥನೆ ಮಾಡಲಾಗುತ್ತಿತ್ತು. ಪೆರುವಾಯಿಯಲ್ಲಿ ಆಟಿಯಲ್ಲಿ ನಡೆಯುವ ದೈವಾರಾಧನೆ ವಿಶಿಷ್ಟವಾಗಿದೆ ಎಂದು ಹೇಳಿದರು.
ನಿವೃತ್ತ ಕೃಷಿಕ ಎಂ.ಕೆ.ಕುಕ್ಕಾಜೆ ಅವರು ಮಾತನಾಡಿ, ಆಟಿಯಲ್ಲಿ ತುಳುನಾಡಿನ ದೈವ ಘಟ್ಟ ಹತ್ತುತ್ತದೆ ಎಂಬುದು ಸರಿಯಲ್ಲ, ದೈವಗಳು ಒಂದು ಸ್ಥಳದಲ್ಲಿ ನೆಲೆಯಾದ ಅನಂತರ ವಿಧಿ ಪ್ರಕಾರವೇ ಅವುಗಳನ್ನು ಕೊಂಡೊಯ್ಯಬೇಕಾಗುತ್ತದೆ. ಆಟಿ ಸಮಯದಲ್ಲಿ ತುಳುನಾಡಿನಲ್ಲಿ ಹಿಂದೆ ಕಷ್ಟದ ಕಾಲವಿತ್ತು. ಹಾಗಾಗಿ ದೈವ ಆರಾಧನೆ ಮಾಡುವವರು ಘಟ್ಟ ಪ್ರದೇಶಕ್ಕೆ ಉದ್ಯೋಗ ನಿಮಿತ್ತ ಹೋಗಿಬರುತ್ತಿದ್ದರು. ಅದೇ ರೀತಿ ಆಟಿಯಲ್ಲಿ ದೈವರಾಧನೆ ಮಾಡಬಾರದು ಎಂಬುದಾಗಿಯೂ ಇಲ್ಲ. ಬಡತನವಿದ್ದುದರಿಂದ, ವ್ಯವಸ್ಥೆ ಇಲ್ಲದ ಕಾರಣಕ್ಕೆ ಕೆಲವರು ಆರಾಧನೆ ಮಾಡಿರಲಿಲ್ಲ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿಯ ಅಧ್ಯಕ್ಷ ತಾರನಾಥ್ ಗಟ್ಟಿ ಕಾಪಿಕಾಡ್ ಅವರು ಮಾತನಾಡಿ, ತುಳುವಿನ ವೈಶಿಷ್ಟ್ಯತೆಯನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದಕ್ಕಾಗಿ ಅಕಾಡೆಮಿಯು ದಾಖಲೀಕರಣಕ್ಕೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಗಟ್ಟಿ ಮಳಿ ಅವರು ಮಾತನಾಡಿ ಕಾಸರಗೋಡು, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ತುಳುನಾಡು ರೂಪುಗೊಳ್ಳಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು. ದೈವರಾಧಕರಾದ ಆನಂದ ನಲಿಕೆ, ಐತಪ್ಪ ಆರಿಕ್ಕಾಡಿ ಕುಂಬಳೆ, ಪೆರುವಾಯಿ ಗುತ್ತಿನ ಹಿರಿಯರಾದ ರಾಜೇಂದ್ರನಾಥ್ ರೈ ಪ್ರತಿಕ್ರಿಯೆ ನೀಡಿದರು. ಸಾಕ್ಷ್ಯಚಿತ್ರದ ನಿರ್ದೇಶಕ ರಮೇಶ್ ಮಂಜೇಶ್ವರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಸಂಚಾಲಕ ಬೂಬ ಪೂಜಾರಿ ಮಳಲಿ, ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಎ.ಸಿ ಭಂಡಾರಿ, ಅಕಾಡೆಮಿಯ ಸದಸ್ಯರಾದ ಪಾಂಗಾಳ ಬಾಬು ಕೊರಗ ಉಪಸ್ಥಿತರಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಸದಸ್ಯರಾದ ಕುಂಬ್ರ ದುರ್ಗಾ ಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು, ಸದಸ್ಯ ಸಂತೋಷ್ ರೈ ಹಿರಿಯಡ್ಕ ವಂದಿಸಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678