• Home  
  • ಆಟಿ ಆಚರಣೆಗಳಿಂದ ತುಳುನಾಡಿನ ಸಂಸ್ಕೃತಿ ಸಮೃದ್ಧಗೊಂಡಿದೆ“ -ಡಾ.ಮಂಜುಳಾ ಶೆಟ್ಟಿ
- DAKSHINA KANNADA - HOME

ಆಟಿ ಆಚರಣೆಗಳಿಂದ ತುಳುನಾಡಿನ ಸಂಸ್ಕೃತಿ ಸಮೃದ್ಧಗೊಂಡಿದೆ“ -ಡಾ.ಮಂಜುಳಾ ಶೆಟ್ಟಿ

ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ, ಬಂಟರ ಸಂಘ ಸುರತ್ಕಲ್ ಇದರ ಸಹಯೋಗದಲ್ಲಿ “ಆಟಿದ ಪೊರ್ಲು” ಮತ್ತು ಅಭಿನಂದನಾ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು.ವೇದಿಕೆಯನ್ನು ದನಗಳನ್ನು ಕಟ್ಟಲಾಗಿರುವ ಸಾಂಪ್ರದಾಯಿಕ ಹಟ್ಟಿಯ ಸ್ವರೂಪದಲ್ಲಿ ನಿರ್ಮಿಸಲಾಗಿತ್ತು. ಭತ್ತದ ಪೈರು ಹೊಡೆಯುವ ಪಡಿ ಮಂಚಕ್ಕೆ ಪೊಲಿ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಬಳಿಕ ಮಾತಾಡಿದ ಬಂಟರ ಯಾನೆ ನಾಡವರ ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ನಿಟ್ಟೆಗುತ್ತು ರವಿರಾಜ್ ಶೆಟ್ಟಿ ಅವರು, “ಬಂಟ ಸಮುದಾಯದ ಯುವಕರು ಸಂಘಟನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಬಂಟರ ಸಂಘ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಹಮ್ಮಿಕೊಂಡಿರುವುದು ಖುಷಿಯ ವಿಚಾರ. ಕಾರ್ಯಕ್ರಮ ಯಶಸ್ವಿಯಾಗಲಿ“ ಎಂದರು.

ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಬಸ್ ಮಾಲಕರ ಸಂಘದ ಮಾಜಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು ಮಾತಾಡಿ, ”ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೇ ಸಂತಸದ ವಿಷಯ. ಆಟಿ ತಿಂಗಳ ಬಗ್ಗೆ ಹೆಚ್ಚೇನೂ ಹೇಳಬೇಕಿಲ್ಲ. ಇಲ್ಲಿ ನಿರ್ಮಾಣವಾದ ಸುಂದರ ವೇದಿಕೆ ಕಾರ್ಯಕ್ರಮದ ಸೊಬಗನ್ನು ಹೆಚ್ಚಿಸಿದೆ. ಸುರತ್ಕಲ್ ಬಂಟರ ಸಂಘ ಮತ್ತು ಮಹಿಳಾ ವೇದಿಕೆ ಇಂತಹ ಕಾರ್ಯಕ್ರಮಗಳನ್ನು ಇನ್ನಷ್ಟು ಆಯೋಜಿಸಲಿ“ ಎಂದರು.

ಆಟಿ ತಿಂಗಳ ಆಚರಣೆಗಳ ಕುರಿತು ಮಾತಾಡಿದ ಮೊಂಟೆಪದವು ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾದ ಡಾ.ಮಂಜುಳಾ ಶೆಟ್ಟಿ ಅವರು ದಿಕ್ಸೂಚಿ ಭಾಷಣದಲ್ಲಿ “ತುಳುನಾಡು ಸಮೃದ್ಧವಾದ ಪ್ರದೇಶ. ಇಲ್ಲಿನ ಕೃಷಿಭೂಮಿಯಷ್ಟೇ ಆಚರಣೆಗಳು ಕೂಡ ಸಮೃದ್ಧವಾಗಿದೆ. ಹಿಂದಿನ ಕಾಲದಲ್ಲಿ ಆಟಿ ತಿಂಗಳು ತುಳುವರ ಕಷ್ಟದ ತಿಂಗಳು ಯಾಕೆಂದರೆ ಆಗ ಕೃಷಿಯನ್ನೇ ನಂಬಿಕೊಂಡು ಬದುಕುತ್ತಿದ್ದ ತುಳುವರು ಆಟಿಯ ಜೋರಾದ ಮಳೆ, ಬಿಸಿಲು ಇದರ ಮಧ್ಯೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಾಗದೆ ಸಂಕಷ್ಟ ಎದುರಿಸುತ್ತಿದ್ದರು. ಆಟಿ ತಿಂಗಳಲ್ಲಿ ತಿನ್ನಲು ಪ್ರಕೃತಿದತ್ತವಾಗಿ ಸಿಗುವ ಆಹಾರ ಪದಾರ್ಥಗಳನ್ನು ಬಳಸುತ್ತಿದ್ದರು. ಹೀಗಾಗಿ ತುಳುವರ ಆರೋಗ್ಯವೂ ವೃದ್ಧಿಯಾಗುತ್ತಿತ್ತು. ಆಟಿ ತಿಂಗಳ ಹತ್ತಾರು ಆಚರಣೆಗಳು ತುಳುನಾಡಿನಲ್ಲಿ ಇಂದಿಗೂ ಜೀವಂತವಾಗಿವೆ. ಇದು ನಮಗೆ ನಿಜಕ್ಕೂ ಖುಷಿಯ ವಿಚಾರ. ಇಂತಹ ಆಚರಣೆಗಳನ್ನು ಇಂದಿನ ತಲೆಮಾರಿನ ಯುವಜನರಿಗೆ ತಿಳಿಸುವ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯುತ್ತಿರಲಿ“ ಎಂದರು.

ವೇದಿಕೆಯಲ್ಲಿ ಶಾರದಾ ಡೆವಲಪರ್ಸ್ ಹೆಜಮಾಡಿ ಇದರ ಮಾಲಕ ಪ್ರೇಮ್ ನಾಥ್ ಎಂ ಶೆಟ್ಟಿ, ಮಲ್ಲಿಕಾ ಯಶವಂತ ಶೆಟ್ಟಿ ಬಳ್ಕುಂಜೆಗುತ್ತು ಉಪಸ್ಥಿತರಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ.ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾದ ಲೋಕಯ್ಯ ಶೆಟ್ಟಿ ಮುಂಚೂರು, ಉಪಾಧ್ಯಕ್ಷ ಪ್ರವೀಣ್ ಪಿ ಶೆಟ್ಟಿ ಸುರತ್ಕಲ್, ಪ್ರಧಾನ ಕಾರ್ಯದರ್ಶಿ ಲೀಲಾಧರ ‌ಶೆಟ್ಟಿ ಕಟ್ಲ, ಕೋಶಾಧಿಕಾರಿ ರತ್ನಾಕರ್ ಶೆಟ್ಟಿ ಸುರತ್ಕಲ್ , ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಜಯಂತಿ ಟಿ ರೈ, ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ, ಕೋಶಾಧಿಕಾರಿ ಮಾಲತಿ ಜೆ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ:
ಇದೇ ಸಮಾರಂಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಂತೋಷ್ ಕುಮಾರ್ ಎಸ್ ಶೆಟ್ಟಿ ಕುತ್ತೆತ್ತೂರು, ಸಹಕಾರ ಕ್ಷೇತ್ರದಲ್ಲಿ ವಿನಯಕುಮಾರ್ ಸೂರಿಂಜೆ, ಸಾಹಿತ್ಯ-ಶಿಕ್ಷಣ ಕ್ಷೇತ್ರದಲ್ಲಿ ಜ್ಯೋತಿ ಚೇಳಾರ್, ಮಾಧ್ಯಮ‌ ಕ್ಷೇತ್ರದಲ್ಲಿ ಲೋಕೇಶ್ ಸುರತ್ಕಲ್, ದೈವಾರಾಧನೆ ಕ್ಷೇತ್ರದಲ್ಲಿ ಭೋಜ ಪಾತ್ರಿ ಮಧ್ಯ ಅವರನ್ನು ವೇದಿಕೆಯಲ್ಲಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ದಿವಾಕರ ಶೆಟ್ಟಿ ಚೇಳಾಯರು ಪ್ರಾರ್ಥನೆಯ ಮೂಲಕ ದೇವರನ್ನು ಸ್ತುತಿಸಿದರು. ಸುರತ್ಕಲ್ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಅತಿಥಿಗಳನ್ನು ಸ್ವಾಗತಿಸಿದರು.

ಬೆಳಗ್ಗೆ ಗ್ರಾಮವಾರು ಜಾನಪದ ನೃತ್ಯ, ರೂಪಕ ನಡೆಯಿತು. ಪುರುಷರಿಗೆ ತೆಂಗಿನಕಾಯಿ ಕುಟ್ಟುವುದು, ಮುಂಡಾಸು ಕಟ್ಟುವುದು, ಮಹಿಳೆಯರಿಗೆ ಹಿಡಿಸೂಡಿ ತಯಾರಿಸುವುದು, ಮಡಲು ಹೆಣೆಯುವುದು ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸಭಾ ಕಾರ್ಯಕ್ರಮದ ಬಳಿಕ ದಿನೇಶ್ ಅತ್ತಾವರ ನಿರ್ದೇಶನದಲ್ಲಿ ರಂಗಚಲನ ಕಲಾವಿದರಿಂದ ತುಳುನಾಡಿನ ಸೌಹಾರ್ದ ಪರಂಪರೆನ್ನು ಬಿಂಬಿಸುವ “ಜಾಗ್ ರ್ತೆ“ ತುಳು ಕಿರುನಾಟಕ ಪ್ರದರ್ಶನಗೊಂಡಿತು.
ರಾಜೇಶ್ವರಿ ಡಿ ಶೆಟ್ಟಿ ವಂದಿಸಿದರು. ಡಾ ಸುಧಾ ಚಂದ್ರಶೇಖರ ಶೆಟ್ಟಿ, ಅನೂಪ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678