ಮಂಗಳೂರು ನ .14: ಉಳ್ಳಾಲ ತಾಲೂಕಿನ ಕುಂಪಲ ಬೈಪಾಸ್ ಸಮೀಪದ ಜನವಸತಿ ಪ್ರದೇಶದಲ್ಲಿ. ಬೀದಿ ನಾಯಿಯ ದಾಳಿಗೆ ಬಲಿಯಾದ ವ್ಯಕ್ತಿಯನ್ನು 60 ವರ್ಷ ಪ್ರಾಯದ ದಯಾನಂದ ಎಂದು ಗುರುತಿಸಲಾಗಿದೆ. ಇವರು ಕುಂಪಲ ಗ್ರಾಮದ ನಿವಾಸಿ. ಕುಂಪಲ ಬೈಪಾಸ್ ಸಮೀಪದಲ್ಲಿರುವ ಜನವಸತಿ ಪ್ರದೇಶದಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ದಯಾನಂದ ಅವರ ಮೃತದೇಹ ಪತ್ತೆಯಾದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.

ಅವಿವಾಹಿತರಾಗಿದ್ದ ದಯಾನಂದ ಕುಡಿತದ ಚಟ ಹೊಂದಿದ್ದು ರಾತ್ರಿ ವೇಳೆ ಸ್ಥಳೀಯವಾಗಿ ನೇಮ,ಕೋಲ,ಜಾತ್ರೆಗಳಿಗೆ ತೆರಳಿ ಕುಂಪಲದ ಅಂಗಡಿ ಮುಂಭಾಗ ಮಲಗಿ ಬೆಳಗ್ಗಿನ ವೇಳೆ ಮನೆ ಸೇರುತ್ತಿದ್ದರು. ಇಂದು ಮುಂಜಾನೆ ಮೂರು ಮೂವತ್ತರ ವೇಳೆಗೆ ಅಂಗಡಿಯೊಂದರ ಮುಂಭಾಗ ದಯಾನಂದ ಇದ್ದಿದ್ದನ್ನು ಅಂಗಡಿ ಮಾಲೀಕ ವಿನೋದ್ ಎಂಬವರು ನೋಡಿದ್ದಾರೆ. ಆದಾದ ಬಳಿಕ ಬೆಳಗ್ಗೆ ಏಳು ಮೂವತ್ತರ ಸುಮಾರಿಗೆ ಪಕ್ಕದ ಅಂಗಡಿಯೊಂದರ ಮುಂಭಾಗ ವ್ಯಕ್ತಿಯೊಬ್ಬರ ಕಣ್ಣು ಗುಡ್ಡೆಯೊಂದು ಬಿದ್ದಿರೋದು, ಅಂಗಡಿ ಮುಂಭಾಗ ರಕ್ತಸಿಕ್ತವಾಗಿರೋದು ಕಂಡು ಬಂದಿದೆ. ಇನ್ನಷ್ಟು ಪರಿಶೀಲನೆ ಮಾಡಿದಾಗ ಅಂಗಡಿ ಸಮೀಪದ ಮನೆಯೊಂದರ ಮುಂಭಾಗ ರಕ್ತದ ಮಡುವಿನಲ್ಲಿ ಬಿದ್ದಿರುವ ಸ್ಥಿತಿಯಲ್ಲಿ ದಯಾನಂದ ಮೃತದೇಹ ಪತ್ತೆಯಾಗಿದೆ. ಮೃತದೇಹದ ಪಕ್ಕದಲ್ಲೇ ನಾಯಿಯ ಸಹ ಇದ್ದು ಬೀದಿ ನಾಯಿ ದಾಳಿಯ ಅನುಮಾನ ಇನ್ನಷ್ಟು ಬಲವಾಗಿದೆ.
ಸೋಮೇಶ್ವರ ಪುರಸಭಾ ವ್ಯಾಪ್ತಿಯ ಕುಂಪಲದಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿರುವ ಬಗ್ಗೆ ಸ್ಥಳೀಯರು ದೂರಿದ್ದಾರೆ. ಬೀದಿನಾಯಿಯ ದಾಳಿಗೆ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ಜನ ಆಘಾತ ವ್ಯಕ್ತಪಡಿಸಿದ್ದಾರೆ. ದೊಡ್ಡವರನ್ನೆ ಬಿಡದ ಬೀದಿನಾಯಿಗಳು ಮಕ್ಕಳನ್ನು ಜೀವಂತ ಬಿಡಬಹುದಾ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳಬೇಕಾಗಿದೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಫ್.ಎಸ್.ಎಲ್, ಸೋಕೋ ತಂಡ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸೋಮೇಶ್ವರ ಪುರಸಭಾ ಉಪಾಧ್ಯಕ್ಷ ರವಿಶಂಕರ್ ತಿಳಿಸಿದ್ದಾರೆ.