canaratvnews

ಕನ್ನಡ ಅಭಿಮಾನ ಇರಲೇ ಬೇಕು, ಅಭಿಮಾನವಿದ್ದರೆ ಮಾತ್ರ ಕನ್ನಡ ಉಳಿಸಲು ಬೆಳೆಸಲು ಸಾಧ್ಯ. ಸಚಿವರ ದಿನೇಶ್ ಗುಂಡೂರಾವ್

ಮಂಗಳೂರು .ನ 01 : ನವೆಂಬರ್ 1ರಂದು ನಮ್ಮ ರಾಜ್ಯ ಉದಯವಾಯಿತು. ಇದಕ್ಕಾಗಿ ಹೋರಾಡಿದ ಅನೇಕ ಮಹನೀಯರನ್ನು ಸಾಹಿತಿಗಳನ್ನು ಸಂಘ ಸಂಸ್ಥೆಗಳನ್ನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಕನ್ನಡನಾಡಿನ ಇತಿಹಾಸ, ಪರಂಪರೆ, ಸಾಂಸ್ಕೃತಿಕ ಹಿರಿಮೆ ತುಂಬಾ ವೈಶಿಷ್ಟ್ಯತೆಗಳಿಂದ ಕೂಡಿದೆ. ಅನೇಕ ಸುಪ್ರಸಿದ್ದ ರಾಜಮನೆತನದವರು, ಧೀರರು ಈ ನಾಡಿನಲ್ಲಿ ಆಳ್ವಿಕೆ ನಡೆಸಿ ಅನೇಕ ಅಮೂಲ್ಯ ಮತ್ತು ಜನಪರವಾದ ಕೊಡುಗೆಗಳನ್ನು ರಾಜ್ಯಕ್ಕೆ ನೀಡಿರುತ್ತಾರೆ. ಇವರು ತಮ್ಮ ಆಡಳಿತದ ಕಾಲದಲ್ಲಿ ಕನ್ನಡನಾಡು-ನುಡಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದು ಅವರೆಲ್ಲರ ಕೊಡುಗೆಯನ್ನು ಸ್ಮರಿಸುತ್ತೇನೆ.


ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯನ್ನು ಗೌರವಿಸಬೇಕು ಎಂದು ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರೂ ಪ್ರತಿಪಾದಿಸಿದ್ದರು ಎಂಬುದನ್ನು ನಾವು ಮನಗಾಣಬೇಕಿದೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಕರ್ನಾಟಕವು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು ಹಲವು ಧರ್ಮ, ಜನಾಂಗ ಮತ್ತು ರೈತರ ಕಾಯಕ ಭೂಮಿಯಾಗಿದೆ. ಕರ್ನಾಟಕದಲ್ಲಿ ವೈವಿಧ್ಯಮಯವಾದ ಸಂಸ್ಕೃತಿ, ಜೀವನಪದ್ಧತಿ ನೆಲೆಸಿದೆ. ಭಾವೈಕ್ಯತೆಯ ಸ್ವರ್ಗವಾಗಿರುವ ಕರ್ನಾಟಕದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಿದ್ದಾರೆ. ಸರ್ವಧರ್ಮಗಳ ಸಮನ್ವಯತೆ, ಸೌಹಾರ್ದತೆ ಇಲ್ಲಿ ಮನೆಮಾಡಿವೆ.


ದೇಶಕ್ಕೆ ನಮ್ಮ ಕನ್ನಡ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಹೆಮ್ಮೆಯ ವಿಷಯ. ಕನ್ನಡದ ಜಾನಪದ ಕಲೆಯೂ ಶ್ರೀಮಂತವಾಗಿದೆ. ಗ್ರಾಮೀಣ ಭಾಗದ ಜನಸಮುದಾಯದಿಂದಲೇ ಈ ಜನಪದ ಕಲೆ ಗಟ್ಟಿಯಾಗಿ ಬೇರೂರಿದೆ ಎಂಬುದು ವಿಶೇಷ ಸಂಗತಿಯಾಗಿದೆ.
ತ ಂತ್ರಜ್ಞಾನದ ವೇಗದಲ್ಲಿ ಹಾಗೂ ಇಂದಿನ ಡಿಜಿಟಲ್ ಲೋಕದಲ್ಲಿ ಕನ್ನಡ ಭಾಷೆಯು ಹಿಂದುಳಿಯದಂತೆ ಸರಕಾರವು ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕನ್ನಡ ಭಾಷೆಯಲ್ಲಿ ತಂತ್ರಜ್ಞಾನದ ಅಭಿವೃದ್ಧಿಗೆ ಸರಕಾರ ಹೆಚ್ಚಿನ ಒತ್ತು ನೀಡಿದೆ. ಕನ್ನಡದಲ್ಲಿ ಯೂನಿಕೋಡ್ ಅಕ್ಷರ ವಿನ್ಯಾಸ, ಪರಿವರ್ತಕಗಳು, ಮೊಬೈಲ್‌ನಲ್ಲಿ ಕನ್ನಡ ಬಳಕೆ, ಬೈಲ್ ಲಿಪಿಯಲ್ಲಿ ಕನ್ನಡ ಬಳಕೆ ಮತ್ತಿತರ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಮಾಡಲಾಗಿದೆ. ಕನ್ನಡಕ್ಕೆ ಸಂಬ ಂಧಿಸಿದ ಹಲವಾರು ಸಾಫ್ಟ್ ವೇರ್‌ಗಳು ಇಂದು ಅಸ್ತಿತ್ವದಲ್ಲಿವೆ. ಸಾಮಾಜಿಕ ಜಾಲತಾಣಗಳಲ್ಲೂ ಕನ್ನಡ ಲಿಪಿಯು ಹೆಚ್ಚು ಬಳಕೆಯಾಗುತ್ತಿರುವುದು ಸಂತಸದ ಬೆಳವಣಿಗೆಯಾಗಿರುತ್ತದೆ.


ನಾವು ನಮ್ಮ ಭಾಷೆಯನ್ನು ಯಾವುದೇ ಕಾರಣಕ್ಕೂ ಬಲಿ ಕೊಟ್ಟು ಉದಾರಿಗಳಾಗಬಾರದು. ಭಾಷೆಯ ವ್ಯಾಮೋಹವೂ ಅತಿಯಾಗಿರಬಾರದು, ಆದರೆ ಕನ್ನಡ ಅಭಿಮಾನ ಇರಲೇ ಬೇಕು, ಅಭಿಮಾನವಿದ್ದರೆ ಮಾತ್ರ ಕನ್ನಡ ಉಳಿಸಲು ಬೆಳೆಸಲು ಸಾಧ್ಯ. ಕನ್ನಡ ಭಾಷೆ ತಿಳಿಯದವರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು. ಯಾವುದೇ ಧರ್ಮ, ಭಾಷೆ, ಪ್ರಾಂತ್ಯದವರಾಗಲಿ, ಕರ್ನಾಟಕದಲ್ಲಿ ಇರುವವರೆಲ್ಲರೂ ಕನ್ನಡಿಗರೇ, ಈ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸ ಇದೆ.
ಒಂದು ರಾಷ್ಟ್ರದ ಶ್ರೀಮಂತಿಕೆಯನ್ನು ಅಳೆಯಲು ಕೇವಲ ಜಿ.ಡಿ.ಪಿ. ಯೊಂದೇ ಮಾನದಂಡವಾಗಬಾರದು, ಆ ದೇಶದಲ್ಲಿನ ಕಲೆ, ಸಾಹಿತ್ಯ, ಸಂಸ್ಕೃತಿ ಎಷ್ಟೊಂದು ಗಟ್ಟಿಯಾಗಿದೆ ಎಂಬ ಆಧಾರದ ಮೇಲೆ ಆ ದೇಶ ಎಷ್ಟು ಶ್ರೀಮಂತವಾಗಿದೆ ಎಂದು ಗಮನಿಸುವಂತಾದರೆ ಅದು ಅರ್ಥಪೂರ್ಣವಾಗುತ್ತದೆ.


ನಮ್ಮ ರಾಷ್ಟ್ರವು ಸಂಸ್ಕೃತಿ ಮತ್ತು ಕಲೆಗಳಲ್ಲಿ ಇಡೀ ವಿಶ್ವಕ್ಕೇ ಮಾದರಿಯಾಗಿದೆ. ಆದ್ದರಿಂದ ನಮ್ಮ ಬದುಕಿನಲ್ಲಿ ಉತ್ತಮ ಸಂಸ್ಕೃತಿಯನ್ನು ಮೈಗೂಡಿಸಿಕೊಂಡರೆ ನಮ್ಮ ವ್ಯಕ್ತಿತ್ವಕ್ಕೆ ಮತ್ತಷ್ಟು ಮಹತ್ವ ಸಿಗುವುದು ಸಾಧ್ಯ ನಮ್ಮಲ್ಲಿ ಉತ್ತಮ ಸಂಸ್ಕೃತಿಯ ಬಂಧ ಗಟ್ಟಿಯಾಗಿರುವುದರಿಂದಲೇ ಮಾನವೀಯ ಸಂಬಂಧಗಳೂ ಅತ್ಯಂತ ಜೀವಂತವಾಗಿವೆ, ಇದು ಸುಖೀ ಕುಟುಂಬಕ್ಕೆ ಅಗತ್ಯವಾದ ಅಂಶವಾಗಿದೆ.
ಕನ್ನಡ ಭಾಷೆ ಸಮೃದ್ಧವಾಗಿದೆ ಎಂದು ನಾವು ಕೈಕಟ್ಟಿ ಕುಳಿತುಕೊಳ್ಳಬಾರದು. ಆಧುನಿಕ ಶಿಕ್ಷಣ ಕ್ರಮದಿಂದ ಕನ್ನಡ ಕಲಿಕೆಯ ಬಗ್ಗೆ ಯುವಜನಾಂಗದಲ್ಲಿ ಮತ್ತು ಮಕ್ಕಳಲ್ಲಿ ಇನ್ನಷ್ಟು ಪ್ರೀತಿ ಮತ್ತು ಕಾಳಜಿ ಮೂಡುವಂತೆ ನಾವು ಪಾಲಕರು ಗಮನಹರಿಸಬೇಕು.


ಕನ್ನಡವನ್ನು ಹೆಚ್ಚೆಚ್ಚು ಜನರು ಮಾತನಾಡಿದಾಗ ಮತ್ತು ಬಳಸಿದಾಗ ಮಾತ್ರ ಕನ್ನಡದ ಬೆಳವಣಿಗೆ ಸಾಧ್ಯ ಕನ್ನಡದ ಲಿಪಿಯನ್ನು ಮುಂದಿನ ಜನಾಂಗಕ್ಕೂ ಬರೆಯಲು ಕಲಿಸಿದಾಗ ಮಾತ್ರ ಈ ಭಾಷೆಯನ್ನು ಜತನದಿಂದ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಕನ್ನಡ ನುಡಿ ಗಡಿ, ಸಂಸ್ಕೃತಿ ಮತ್ತು ಸಂಪನ್ಮೂಲಗಳ ಸಂರಕ್ಷಣೆಗೆ ಸರಕಾರ ಬದ್ಧವಾಗಿದೆ. ಜನಪದ, ಸಂಸ್ಕೃತಿ, ಸಾಹಿತ್ಯ ರಂಗಭೂಮಿ ಕಲೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿಯ ಕಾರ್ಯಕ್ರಮಗಳಿಗೆ ಹೆಚ್ಚು ಅನುದಾನ ನೀಡಲಾಗುತ್ತಿದೆ. ರಾಜ್ಯದ ಸಮೃದ್ಧ ಪ್ರಾಚೀನ ಸ್ಮಾರಕಗಳ ಮತ್ತು ಪರಂಪರೆಯ ಸಂಪತ್ತನ್ನು ರಕ್ಷಿಸಲು ಕಾರ್ಯಪ್ರವೃತ್ತರಾಗಿದ್ದೇವೆ.

ಸಮೃದ್ಧ ಕರ್ನಾಟಕ ನಿರ್ಮಾಣ ಮಾಡುವುದೇ ನಮ್ಮ ಸರ್ಕಾರದ ಪ್ರಮುಖ ಉದ್ದೇಶವಾಗಿದ್ದು ಅನೇಕ ಜನಪರ ಕಾರ್ಯಕ್ರಮಗಳನ್ನು ಘೋಷಿಸಿ ಜಾರಿಗೆ ತರಲಾಗಿದೆ.
ಏಕೀಕೃತ ಕರ್ನಾಟಕ ರಾಜ್ಯ ಉದಯವಾಗಿನಿಂದಲೂ ಕೇಳಿಬರುತ್ತಿದ್ದ ಪ್ರಾದೇಶಿಕ ಅಸಮತೋಲನದ ಕೂಗನ್ನು ನಿವಾರಿಸಲು ನಾವು ಸಾಕಷ್ಟು ಶ್ರಮವಹಿಸುತ್ತಿದ್ದೇವೆ.

ಆಡಳಿತವನ್ನು ಜನಸಾಮಾನ್ಯರತ್ತ ಕೊಂಡೊಯ್ದು ಅವರಲ್ಲಿ ಸಂತೃಪ್ತಿಯನ್ನು ಮೂಡಿಸಲು ಕರ್ನಾಟಕ ಸರ್ಕಾರ ಬದ್ಧವಾಗಿದೆ. ಪರಿಶಿಷ್ಠ ಜನಾಂಗ, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ವಿಶೇಷವಾಗಿ ದುರ್ಬಲರು ಮತ್ತು ಕೃಷಿ ಕಾರ್ಮಿಕರ ಕಲ್ಯಾಣಕ್ಕಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದು ಪ್ರತಿಯೊಬ್ಬರಲ್ಲಿಯೂ ಹರುಷವನ್ನು ತಂದಿದೆ. ರಾಜ್ಯದ ಬಹುತೇಕ ಜನರು ಇಂದು ಸರಕಾರದ ಒಂದಿಲ್ಲೊ ಂದು ಯೋಜನೆಯಲ್ಲಿ ನೇರ ಫಲಾನುಭವಿಗಳಾಗಿ ಪ್ರಯೋಜನ ಪಡೆಯುತ್ತಿದ್ದಾರೆ.


ಸಹಬಾಳ್ವೆ, ಸಹಿಷ್ಣುತೆಗೆ ಹೆಸರಾದ ನಾವೆಲ್ಲರೂ ಈ ನಾಡಿನ ಪರಂಪರೆ, ಐತಿಹಾಸಿಕತೆ ಮತ್ತು ಸಂಸ್ಕೃತಿಯನ್ನು ಉಳಿಸಲು ಸದಾ ಬದ್ಧರಾಗಿರಬೇಕು. ಜಾತಿ-ಮತಗಳ ಬೇದಭಾವವನ್ನು ತೊರೆದು ಜಿಲ್ಲೆಯ ಎಲ್ಲ ಜನತೆ ಸಹೋದರ ಭಾವನೆಯಿಂದ ನಡೆದುಕೊಳ್ಳುವುದರ ಮೂಲಕ ರಾಜ್ಯ ಹಾಗೂ ಜಿಲ್ಲೆಯಲ್ಲಿ ಸೌಹಾರ್ದತೆಯನ್ನು ಕಾಪಾಡಿಕೊಂಡು ಬರುವಲ್ಲಿ ಎಲ್ಲರೂ ಸಹಕರಿಸಬೇಕಾಗಿದೆ, ಈ ಜಿಲ್ಲೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ನಾವೆಲ್ಲರೂ ಸೇರಿ ಶ್ರಮಿಸೋಣ ಎಂದು ಆಶಿಸುತ್ತೇನೆ.


ನಾಡಿನ ಮತ್ತು ಜಿಲ್ಲೆಯ ಭೌತಿಕ, ನೈಸರ್ಗಿಕ ಮತ್ತು ಮಾನವ ಸಂಪನ್ಮೂಲಗಳ ಅಭಿವೃದ್ಧಿಯೂ ಸೇರಿದಂತೆ ಸರ್ವಾಂಗೀಣ ಪ್ರಗತಿ ಸಾಧಿಸಲು ನಾವೆಲ್ಲರೂ ಕಂಕಣಬದ್ದರಾಗಿ ಶ್ರಮಿಸೋಣ. ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಸದೃಢ, ಸಮೃದ್ಧ ಹಾಗೂ ಸ್ವಾವಲಂಬಿ ಕರ್ನಾಟಕವನ್ನು ನಿರ್ಮಿಸಲು ಪಣ ತೊಡೋಣ. ಉಸ್ತುವಾರಿ ಸಚಿವರ ದಿನೇಶ್ ಗುಂಡೂರಾವ್ ರಾಜ್ಯೋತ್ಸವ ಸಂದೇಶ ನೀಡಿದ್ದಾರೆ

Share News
Exit mobile version