canaratvnews

*ಮಂಗಳೂರು ಧರ್ಮಪ್ರಾಂತ್ಯದಲ್ಲಿ ಭಕ್ತಿಭಾವದ ಗರಿಗಳ ಭಾನುವಾರ ಆಚರಣೆ: ಪವಿತ್ರ ವಾರಕ್ಕೆ ಚಾಲನೆ*

ಮಂಗಳೂರು: ಯೇಸು ಕ್ರಿಸ್ತರು ಜೆರುಸಲೇಮ್ ನಗರವನ್ನು ವಿಜಯೋತ್ಸವದೊಂದಿಗೆ ಪ್ರವೇಶಿಸಿದ ಸವಿನೆನಪಿಗಾಗಿ ಆಚರಿಸಲಾಗುವ ‘ಗರಿಗಳ ಭಾನುವಾರ’ವನ್ನು (Palm Sunday) ಮಂಗಳೂರು ಧರ್ಮಪ್ರಾಂತ್ಯದಾದ್ಯಂತ ಮಾರ್ಚ್ 29ರ ಭಾನುವಾರ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ಇದರೊಂದಿಗೆ ಕ್ರೈಸ್ತರ ಅತ್ಯಂತ ಪವಿತ್ರ ವಾರಕ್ಕೆ ಅಧಿಕೃತ ಚಾಲನೆ ದೊರೆತಂತಾಗಿದೆ.

ಸುರತ್ಕಲ್ ವಲಯದ ಮುಕ್ಕ ಪವಿತ್ರಾತ್ಮರ ದೇವಾಲಯದಲ್ಲಿ (Holy Spirit Church, Mukka) ನಡೆದ ಪ್ರಧಾನ ಬಲಿಪೂಜೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಡಾ. ಪೀಟರ್ ಪಾಲ್ ಸಲ್ಡಾನ್ಹಾ ಅವರು ನೆರವೇರಿಸಿದರು. ಕ್ರಿಸ್ತನ ರಾಯಭಾರತ್ವ ಹಾಗೂ ಪಾಡುಗಳ ಸಂಕೇತವಾದ ಕೆಂಪು ವಸ್ತ್ರಧಾರಿಗಳಾಗಿದ್ದ ಬಿಷಪರು, ತಾಳೆ ಗರಿಗಳನ್ನು ಆಶೀರ್ವದಿಸಿದರು.

ನಂತರ ವಿಶ್ವಾಸಿಗಳೊಂದಿಗೆ ಮೆರವಣಿಗೆಯಲ್ಲಿ ಸಾಗುವ ಮೂಲಕ ಯೇಸುವಿನ ಜೆರುಸಲೇಮ್ ಪ್ರವೇಶವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಮುಕ್ಕದ ಧರ್ಮಗುರುಗಳಾದ ವಂದನೀಯ ಫಾದರ್ ಸ್ಟ್ಯಾನಿ ಪಿಂಟೊ ಮತ್ತು ಮಂಗಳೂರು ಐಸಿವೈಎಂನ ನಿಯೋಜಿತ ನಿರ್ದೇಶಕರಾದ ವಂದನೀಯ ಫಾದರ್ ಪ್ರವೀಣ್ ಡಿಸೋಜಾ ಉಪಸ್ಥಿತರಿದ್ದರು.

ಪವಿತ್ರ ಬೈಬಲ್‌ನ ಪ್ರಕಾರ, ಯೇಸು ಕ್ರಿಸ್ತರು ತಮ್ಮ ಶಿಲುಬೆ ಮರಣಕ್ಕೂ ಮೊದಲು ಬೆಥಾನಿಯಾದಿಂದ ದೇವನಗರಿ ಜೆರುಸಲೇಮಿಗೆ ಪ್ರವೇಶ ಮಾಡಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಜನರು ‘ಒಲಿವ್’ ಮರದ ಗರಿಗಳನ್ನು ಹಿಡಿದು, “ದಾವಿದ ಪುತ್ರನಿಗೆ ಹೊಸನ್ನಾ” ಎಂದು ಜಯಘೋಷ ಹಾಕುತ್ತಾ ಅವರನ್ನು ವೈಭವದಿಂದ ಸ್ವಾಗತಿಸಿದ್ದರು.

ಇದರ ಸಂಕೇತವಾಗಿ ಕ್ರೈಸ್ತರು ಶುಭ ಶುಕ್ರವಾರದ ಮುಂಚಿನ ಭಾನುವಾರವನ್ನು ‘ಗರಿಗಳ ಭಾನುವಾರವಾಗಿ ಮಂಗಳೂರು ಧರ್ಮಪ್ರಾಂತ್ಯದಾದ್ಯಂತ ಅತ್ಯಂತ ಭಕ್ತಿಭಾವದಿಂದ ಆಚರಿಸಲಾಯಿತು. ವಿಶ್ವಾಸಿಗಳು ತೆಂಗಿನ ಗರಿಗಳನ್ನು ಹಿಡಿದು ಮೆರವಣಿಗೆ ಹಾಗೂ ಬಲಿಪೂಜೆಯಲ್ಲಿ ಪಾಲ್ಗೊಳ್ಳುವುದು ಇದರ ವಿಶೇಷ.



Share News
Exit mobile version