ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ದಲಿತ್ ಸೇವಾ ಸಮಿತಿ (ರಿ.) ವಿಟ್ಲ ಘಟಕದ ಮಾಸಿಕ ಸಭೆಯು ಮಾರ್ಚ್ 15ರಂದು ವಿಟ್ಲದ ಅಧ್ಯಾಪಕರ ಸಭಾಭವನದಲ್ಲಿ ಜಿಲ್ಲಾಧ್ಯಕ್ಷರಾದ ಗೋಪಾಲ್ ಕೆ. ನೇರಳಕಟ್ಟೆ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ಮುಂದಿನ ತಿಂಗಳು ನಡೆಯಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮದ ಕುರಿತು ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಸಂಘಟನೆಯ ಸ್ಥಾಪಕಾಧ್ಯಕ್ಷರು ಮಾತನಾಡಿ, ಜಯಂತಿಯ ದಿನದಂದು ಸಂಘದ ಪುರುಷ ಪದಾಧಿಕಾರಿಗಳು ಮತ್ತು ಸದಸ್ಯರು ಬಿಳಿ ಅಂಗಿ ಹಾಗೂ ನೀಲಿ ಶಾಲು ಧರಿಸುವಂತೆ ಮತ್ತು ಮಹಿಳಾ ಸದಸ್ಯೆಯರು ನೀಲಿ ಸೀರೆ ಧರಿಸಿ ಹಾಜರಿರುವಂತೆ ಸೂಚಿಸಿದರು. ಇದಕ್ಕೆ ಸಭೆಯಲ್ಲಿದ್ದ ಸರ್ವ ಸದಸ್ಯರು ಒಮ್ಮತದ ಸಮ್ಮತಿ ಸೂಚಿಸಿದರು.
ಕಾರ್ಯಕ್ರಮದ ಯಶಸ್ಸಿಗಾಗಿ ಸದಸ್ಯರು ಆರ್ಥಿಕ ನೆರವಿನ ಭರವಸೆ ನೀಡುವುದರ ಜೊತೆಗೆ, ಒಬ್ಬೊಬ್ಬರು ಒಂದೊಂದು ಜವಾಬ್ದಾರಿಯನ್ನು ಹಂಚಿಕೊಂಡರು. ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಳಿಕೆ ಶ್ರೀ ಸತ್ಯಸಾಯಿ ಶಾಲೆಯ ಶಿಕ್ಷಕರಾದ ಆನಂದ ನಾಯ್ಕ ಮಲಾರ್ ಅವರು, ಅಂಬೇಡ್ಕರ್ ಜಯಂತಿಯಂದು ಮಕ್ಕಳಿಗೆ ವಿತರಿಸಲು 100 ನೋಟ್ ಪುಸ್ತಕಗಳನ್ನು ಕೊಡುಗೆಯಾಗಿ ನೀಡುವುದಾಗಿ ಘೋಷಿಸಿದರು.
ಸಭೆಯಲ್ಲಿ ಸಂಘಟನೆಯ ಕಾರ್ಯಾಧ್ಯಕ್ಷರಾದ ಚಂದ್ರಶೇಖರ್ ಯು. ವಿಟ್ಲ ಸೇರಿದಂತೆ ಪ್ರಮುಖ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

