ಮಂಗಳೂರು ಜೂನ್ 24 ನೆಲ್ಯಾಡಿ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದು, ಹೆದ್ದಾರಿಯೆಲ್ಲ ಮಣ್ಣು ಹಾಗೂ ಮರಗಳಿಂದ ಮುಚ್ಚಿಹೋಗಿದೆ.

ಈ ಪ್ರದೇಶದಲ್ಲಿ ಚತುಷ್ಪಥ ಕಾಮಗಾರಿಯ ಹಿನ್ನೆಲೆಯಲ್ಲಿ ಅತ್ಯಂತ ಎತ್ತರದ ಗುಡ್ಡವನ್ನು ಯಾವುದೇ ಮುನ್ನೆಚ್ಚರಿಕೆಯ ಕ್ರಮವಿಲ್ಲದೆ ಕತ್ತರಿಸಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ . ಪರಿಣಾಮವಾಗಿ ಮಳೆ ಬರುತ್ತಿದ್ದಂತೆ ಮಣ್ಣು ಸಡಿಲಗೊಂಡು ಕುಸಿದು, ಹೆದ್ದಾರಿ ಬಂದ್ ಆಗುವ ಸ್ಥಿತಿ ನಿರ್ಮಾಣವಾಗಿದೆ.

ದೊಡ್ಡ ವಾಹನಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದರೆ, ಕೆಲವು ಸಣ್ಣ ವಾಹನಗಳು ಕಿರಿದಾದ ಜಾಗದಲ್ಲಿ ಸಾಗುವ ಚಿತ್ರಣ ಕಂಡುಬಂದಿದೆ . ಈ ರಸ್ತೆ ಅವಲಂಬಿಸಿರುವ ಸಾವಿರಾರು ಪ್ರಯಾಣಿಕರು ಹಾಗೂ ವಾಹನ ಸವಾರರು ಆತಂಕದಲ್ಲಿದ್ದಾರೆ. ನೆಲ್ಯಾಡಿ ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಬಂಧಪಟ್ಟವರಿಂದ ಮಣ್ಣನ್ನು ತೆರೆವುಗೊಳಿಸುವ ಕಾರ್ಯ ನಡೆಸುತ್ತಿದ್ದಾರೆ.

ಈ ಮಾರ್ಗದ ಮೇಲೆ ನಿರಂತರವಾಗಿ ಅನಾಹುತಗಳು ನಡೆಯುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ. ಕಾಮಗಾರಿ ಗುಣಮಟ್ಟ, ಸುರಕ್ಷತಾ ಕ್ರಮಗಳ ಅವ್ಯವಸ್ಥೆ, ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಕುರಿತು ಸಾರ್ವಜನಿಕ ಆಕ್ರೋಶ ತೀವ್ರಗೊಂಡಿದೆ.