ಪೆರುವಾಯಿ, ಜು. 12: ರೈತರು ತೋಟಗಾರಿಕೆ ಬೆಳೆಗಳ ಬಗ್ಗೆ ಸಮಗ್ರ ಮಾಹಿತಿ ಹೊಂದಿರಬೇಕು. ಬೆಳೆ ವಿಮೆ ರೈತರಿಗೆ ಇರುವ ಅತ್ಯುತ್ತಮ ಯೋಜನೆ. ಬೆಳೆ ನಷ್ಟ ಪರಿಹಾರವನ್ನು ಪಡೆದುಕೊಳ್ಳುವ ಅವಕಾಶವಾಗಿದೆ ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಡಿಸೋಜ ಹೇಳಿದರು.
ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಪೆರುವಾಯಿ ಘಟಕ, ಪೆರುವಾಯಿ ಚರ್ಚ್ ಪರಿಸರ ಆಯೋಗ, ತೋಟಗಾರಿಕಾ ಇಲಾಖೆ, ಕೃಷಿ ಇಲಾಖೆ ಬಂಟ್ವಾಳ ಮತ್ತು ಕೃಷಿ ವಿಜ್ಞಾನ ಕೇಂದ್ರ ದಕ್ಷಿಣ ಕನ್ನಡ ಇದರ ಜಂಟಿ ಆಶ್ರಯದಲ್ಲಿ ಪೆರುವಾಯಿ ಫಾತಿಮಾ ಮಾತಾ ಸಮುದಾಯ ಭವನದಲ್ಲಿ ಗುರುವಾರ ನಡೆದ ಸಮಗ್ರ ಕೃಷಿ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪೆರುವಾಯಿ ಫಾತಿಮಾ ಮಾತಾ ದೇವಾಲಯದ ಧರ್ಮಗುರು ವಂ. ಸೈಮನ್ ಡಿಸೋಜ ಮಾತನಾಡಿ,ಕೃಷಿಗೆ ಸಂಬಂಧಿಸಿದಂತೆ ರೈತರು ಅಯಾ ಕಾಲಕ್ಕೆ ತಕ್ಕ ಮಾಹಿತಿಯನ್ನು ಪಡೆದುಕೊಳ್ಳಬೇಕು. ಆಧುನಿಕ ಕೃಷಿ ಪದ್ಧತಿ ಅನುಸರಿಸಿ ಯಶಸ್ಸು ಗಳಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೆರುವಾಯಿ ಗ್ರಾಮ ಪಂಚಾಯತ್ ಅಧ್ಯಕ್ಷೆ ನೆಫಿಸಾರವರು ಶುಭ ಹಾರೈಸಿದರು. ಕೃಷಿ ವಿಜ್ಞಾನ ಕೇಂದ್ರದ ಡಾ. ರಶ್ಮಿ ಆರ್. ಅವರು ಮಲ್ಲಿಗೆ ಬೇಸಾಯದ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆ ಕೃಷಿ ಅಧಿಕಾರಿ ಬೆಳೆ ವಿಮೆ ಮತ್ತು ಬೆಳೆ ಸಮಿಕ್ಷೆ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗೋವಿಂದ ಭಟ್ ಕಡೆಂಗೋಡ್ಲು ಕಾಳು ಮೆಣಸಿನ ವಿವಿಧ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಮಲ್ಲಿಗೆ ಕೃಷಿ ಟೇರೆಸಿನ ಮೇಲೆ ಅತ್ಯುತ್ತಮ ಸಾಧನೆ ಮಾಡಿದ ರೈತ ರತ್ನ ಪ್ರಶಸ್ತಿ ಪಡೆದ ಅನಿತಾ ಜೆರಾಲ್ಡ್ ಮುಳಿಯ ದಂಪತಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.