ಮಂಗಳೂರು: ಕ್ಯಾನ್ಸರ್ ಗೆದ್ದು ನಿರಾಶ್ರಿತರು, ನಿರ್ಗತಿಕರ ಸೇವೆಯನ್ನು ಮಾಡುತ್ತಿರುವ ಕೋರಿನ್ ಆಂಟೊನಿಯಟ್ ರಸ್ಕಿನಾ ಅವರು ರಾಜ್ಯ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಂಗಳೂರಿನ ಕುಲಶೇಖರದ ವೈಟ್ ಡೌಸ್ ಸಂಸ್ಥೆಯ ಸ್ಥಾಪರಾಗಿದ್ದು, ಕ್ಯಾನ್ಸರ್ ಕಾಯಿಲೆ ಗೆದ್ದು ಸಮಾಜ ಸೇವೆಯಲ್ಲಿ ತೊಡಗಿಕೊಂಡಿರುವ ದಿಟ್ಟ ಮಹಿಳೆ. ತನ್ನ ನೋವನ್ನು ಮರೆತು ತಾನು ಪ್ರೀತಿಸಿದ ನಿರಾಶ್ರಿತರ ಸೇವೆಗಾಗಿ ಸಾವನ್ನೂ ಜಯಿಸಿ ಬಂದವರಾಗಿದ್ದಾರೆ.
ಕಳೆದ ೩೧ ವರ್ಷಗಳಿಂದ ಬೀದಿ ಬದಿಯಲ್ಲಿರುವ ನಿರಾಶ್ರಿತರು, ನಿರ್ಗತಿಕರ, ಮಾನಸಿಕ ಅಸ್ವಸ್ಥರ ಬಾಳಿಗೆ ಬೆಳಕಾಗುತ್ತಿದ್ದಾರೆ.
ವಿದ್ಯಾರ್ಥಿ ಜೀವನದಲ್ಲೇ ಆಸ್ಪತ್ರೆಗಳಿಗೆ ಭೇಟಿ ನೀಡಿ ರೋಗಿಗಳಿಗೆ ಧೈರ್ಯ ತುಂಬುವ ಜತೆಗೆ ಅಗತ್ಯ ವಸ್ತುಗಳನ್ನು ವಿತರಿಸುತ್ತಿದ್ದರು. ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಿ ಸಂಗ್ರಹವಾಗುವ ಹಣದಿಂದ ಬೀದಿಯಲ್ಲಿ ಅಸಾಹಯಕರಾಗಿದ್ದವರಿಗೆ ಒಂದು ಹೊತ್ತಿನ ಊಟ ನೀಡಲು ಆರಂಭಿಸಿ ಇಂದಿಗೂ ಮುಂದುವರೆಸಿದ್ದಾರೆ. ಜತೆಗೆ ಬೀದಿಯಲ್ಲಿ ಅನಾರೋಗ್ಯದಲ್ಲಿದ್ದವರ ಆರೈಕೆ, ಚಿಕಿತ್ಸೆ ನೀಡಲು ಮುಂದಾದರು. ೨೦೧೯ರಲ್ಲಿ ಧರ್ಮಕ್ಷೇತ್ರದ ನೆರವಿನಿಂದ ೨೦೦ ಬೆಡ್ ಗಳ ಕಟ್ಟಡ ನಿರ್ಮಿಸಿ ಸೇವೆ ಮುಂದುವರೆಸಿದರು. ಸುಮಾರು ೧ ಸಾವಿರಕ್ಕೂ ಅಽಕ ನಿರಾಶ್ರಿತ ಮನೋ ರೋಗಿಗಳಿಗೆ ಪುನರ್ವಸತಿ ಕಲ್ಪಿಸಿದ್ದಾರೆ. ೪೬೪ ಮಂದಿಯನ್ನು ಮತ್ತೆ ಅವರ ಕುಟುಂಬದೊಂದಿಗೆ ಪುನರ್ ಮಿಲನ ಮಾಡಿದ ಕೀರ್ತಿ ಹೊಂದಿದ್ದಾರೆ. ಮಣಿಪುರ ಗಲಭೆ ವೇಳೆ ನಿರಾಶ್ರಿತರಾದವರಿಗೆ ಅಗತ್ಯ ವಸ್ತುಗಳನ್ನು ಪೂರೈಸಿದ್ದಾರೆ. ಅಲ್ಲಿನ ೭೬ ವಿದ್ಯಾರ್ಥಿಗಳಿಗೆ ತಮ್ಮ ಸಂಸ್ಥೆಯಲ್ಲಿ ವಸತಿ ಶಿಕ್ಷಣ ಒದಗಿಸಿದ್ದಾರೆ. ಅಲ್ಲದೆ ಅನಾಥ ಮಕ್ಕಳ ಶಿಕ್ಷಣಕ್ಕೂ ಪ್ರೋತ್ಸಾಹ ನೀಡುತ್ತಿದ್ದಾರೆ.






