ಮಂಗಳೂರು: ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದ ವಾಹನಿಗರಿಗೆ ಪ್ರಕರಣಗಳ ಇತ್ಯರ್ಥ ಪಡಿಸಿಕೊಳ್ಳುವುದಕ್ಕಾಗಿ ಶೇ.50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಸಲು ಆ.23ರಿಂದ ಸೆ.12ರವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಬಳಿ (ಎಎಸ್‌ಐ-ಪಿಐ ಡಿವೈಸ್) ಲಾಲ್‌ಬಾಗ್‌ನಲ್ಲಿರುವ ಮನಪಾ ಕಮಾಂಡ್ ಕಂಟ್ರೋಲ್ ಸೆಂಟರ್‌ಗಳಲ್ಲಿ ಪಾವತಿಸಬಹುದು. ಉಳಿದಂತೆ ಕದ್ರಿಯ ಪೂರ್ವ ಸಂಚಾರ ಠಾಣೆ, ಪಾಂಡೇಶ್ವರದ ಪಶ್ಚಿಮ ಸಂಚಾರ ಠಾಣೆ, ಬೈಕಂಪಾಡಿಯ ಮಂಗಳೂರು ಉತ್ತರ ಠಾಣೆ, ಜಪ್ಪಿನಮೊಗರಿನ ದಕ್ಷಿಣ ಸಂಚಾರ ಠಾಣೆ ಮತ್ತು ಪಾಂಡೇಶ್ವರದ ಟ್ರಾಫಿಕ್ ಎಸಿಪಿ ಕಚೇರಿಯಲ್ಲಿ ದಂಡದ ಬಗ್ಗೆ ವಿಚಾರಿಸಿ ಪಾವತಿ ಮಾಡಿ ರಸೀತಿ ಪಡೆಯಬಹುದು.
ಇ- ಚಲನ್ ನೋಟಿಸ್ ಅಂಚೆಯ ಮೂಲಕ ಇ- ಚಲನ್ ನೊಟೀಸ್ ಬಂದಿದ್ದರೆ ಸಂಚಾರ ಠಾಣೆ, ಅಧಿಕಾರಿಗಳಲ್ಲಿ ಪರಿಶೀಲಿಸಿ ದಂಡ ಪಾವತಿಸಲು ಅವಕಾಶವಿದೆ. ಆನ್‌ಲೈನ್ ಸೇವೆಯಾದ ವೆಬ್‌ಸೈಟ್/ಆ್ಯಪ್‌ಗಳ ಮೂಲಕ ಲಾಗಿನ್ ಆಗಿ ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅವಕಾಶವಿದೆ. ಯಾವುದೇ ಅಂಚೆ ಕಚೇರಿಗಳಲ್ಲಿ ವಿಚಾರಿಸಲು ಮತ್ತು ದಂಡ ಪಾವತಿಸಲು ಅವಕಾಶವಿದೆ.ಇ-ಚಲನ್ ಎಸ್ಸೆಮ್ಮೆಸ್ ಸಂಚಾರ ವಿಭಾಗದ ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳಲ್ಲಿ ಪರಿಶೀಲಿಸಲು ಮತ್ತು ದಂಡ ಪಾವತಿಸಲು ಅವಕಾಶವಿದೆ. ಇದರಲ್ಲಿ ದಂಡ ಪಾವತಿಸಲು ಮೇಲಿನ ಆನ್‌ಲೈನ್ ಮತ್ತು ಅಂಚೆ ಸೇವೆಗಳು ಲಭ್ಯವಿಲ್ಲ. ವೆಬ್‌ಸೈಟ್ ಮೂಲಕ ಲಾಗಿನ್ ಆಗಿ ಪರಿಶೀಲಿಸಲು ಮಾತ್ರ ಅವಕಾಶವಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.