ಮಂಗಳೂರು: SSLC ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನವು ಏಪ್ರಿಲ್ 15, 2025ರಿಂದ ಪ್ರಾರಂಭವಾಗಲಿದೆ. ಅಂದು ಕ್ರೈಸ್ತ ಸಮುದಾಯಕ್ಕೆ ಶುಭ ಗುರುವಾರ ಸೇರಿದಂತೆ ಮೂರು ದಿನಗಳ ನಿರಂತರ ಹಬ್ಬದ ಪ್ರಯುಕ್ತ ಕ್ರೈಸ್ತ ಶಿಕ್ಷಕರಿಗೆ ಮೌಲ್ಯಮಾಪನದಿಂದ ರಿಯಾಯಿತಿ ಕೋರುವಂತೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ ವತಿಯಿಂದ ದ.ಕ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದೆ.
ಕಳೆದ ಶನಿವಾರ ಮನವಿ ಸಲ್ಲಿಸಿದ ನಿಯೋಗ, ದ.ಕ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದ ಶಿಕ್ಷಕರಿದ್ದು, ಏ.15 ಹಾಗೂ ಮೂರು ದಿನಗಳ ಕಾಲ ನಡೆಯುವ ಹಬ್ಬದ ಪ್ರಯುಕ್ತ ಕ್ರೈಸ್ತ ಶಿಕ್ಷಕರಿಗೆ ರಿಯಾಯಿತಿ ನೀಡುವಂತೆ ಕೇಳಿಕೊಂಡಿದ್ದರು.
ಇದಕ್ಕೆ ಸ್ಥಳದಲ್ಲೇ ಸ್ಥಂದಿಸಿದ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಮನವರಿಕೆ ಮಾಡಿ ಇಲಾಖೆಯ ಅಧಿಕಾರಿ ವರ್ಗದವರಲ್ಲಿ ಸಮಾಲೋಚಿಸಿ ಈ ರಜೆಯನ್ನು ನೀಡುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ಕಥೋಲಿಕ್ ಸಭಾ ತಿಳಿಸಿದೆ.
ನೀಯೋಗದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಆಲ್ವಿನ್ ಡಿ ಸೋಜಾ, ಮಾಜಿ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿ ಕೋಸ್ತಾ, ಫೆಜಾರ್ ವಲಯ ಅಧ್ಯಕ್ಷ ಸಂತೋಷ್ ಡಿ ಸೋಜಾ ಹಾಗೂ ಸಿಟಿ ವಲಯ ಅಧ್ಯಕ್ಷ ಅರುಣ್ ಡಿ ಸೋಜಾ, ಕೇಂದ್ರೀಯ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಮೊಂತೆರೋರವರು ಇದ್ದರು.