ಮಂಗಳೂರು, ಫೆ. 12 : ಕರಾವಳಿ ಜಿಲ್ಲೆಗಳ ವಿವಿಧ ಅಭಿವೃದ್ದಿ ಯೋಜನೆಗಳಿಗೆ ಅಗತ್ಯ ಅನುದಾನವನ್ನು ಮುಂದಿನ ಬಜೆಟ್‍ನಲ್ಲಿ ನೀಡಬೇಕೆಂದು ಮೂರು ಜಿಲ್ಲೆಗಳ ಜನಪ್ರತಿನಿಧಿಗಳು ಆಗ್ರಹಿಸಿದ್ದಾರೆ.
ಗುರುವಾರ ಸ್ಪೀಕರ್ ಯು.ಟಿ. ಖಾದರ್ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ‘ಪ್ರಜಾ ಸೌಧ’ದಲ್ಲಿ ನಡೆದ ಕರಾವಳಿ ಅಭಿವೃದ್ಧಿ ಮಂಡಳಿಯ ಸಭೆಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಚಿವರು, ಶಾಸಕರು ಭಾಗವಹಿಸಿ, ಕರಾವಳಿಯ ಅಭಿವೃದ್ಧಿಯನ್ನು ಸಮಗ್ರವಾಗಿ ಪರಿಗಣಿಸಿ, ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಬೇಕೆಂದು ತಿಳಿಸಿದರು.

ಮೀನುಗಾರಿಕೆ ಮತ್ತು ಬಂದರು ಸಚಿವ ಮಂಕಾಳ ಎಸ್. ವೈದ್ಯ ಮಾತನಾಡಿ, ಕರಾವಳಿಯ 3 ಜಿಲ್ಲೆಗಳ 13 ಮೀನುಗಾರಿಕೆ ಬಂದರುಗಳ ವ್ಯಾಪ್ತಿಯಲ್ಲಿ 70 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತಲು ನಿರ್ಧರಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದ್ದು, ಅನುದಾನ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಸ್ಥಳಗಳಲ್ಲಿ ಮೀನು ಮಾರುಕಟ್ಟೆ ನಿರ್ಮಾಣ ಕೈಗೆತ್ತಿಕೊಳ್ಳಬೇಕು ಎಂದು ಹೇಳಿದರು.
ಕುಂದಾಪುರ ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಕರಾವಳಿ ನಿಯಂತ್ರಣ ವಲಯ (ಸಿಆರ್‍ಝಡ್) ಕಚೇರಿಯನ್ನು ಬೆಂಗಳೂರಿನಿಂದ ಸ್ಥಳಾಂತರಿಸಿ, ಮಂಗಳೂರು ಅಥವಾ ಉಡುಪಿಯಲ್ಲಿ ಸ್ಥಾಪಿಸಬೇಕು. ಇದರಿಂದ ವಿವಿಧ ಸಿಆರ್‍ಝಡ್ ಸಂಬಂಧಿತ ಅನುಮತಿಗಳಿಗೆ ದೀರ್ಘಕಾಲ ಕಾಯುವುದು ತಪ್ಪಲಿದೆ. ಕರಾವಳಿಯಲ್ಲಿ ಕೃಷಿ ವಿಶ್ವವಿದ್ಯಾನಿಲಯ ಅಗತ್ಯವಿದ್ದು, ಬ್ರಹ್ಮಾವರದಲ್ಲಿರುವ ಕೃಷಿ ವಿಜ್ಞಾನ ಕಾಲೇಜನ್ನು ವಿಶ್ವವಿದ್ಯಾನಿಲಯವಾಗಿ ಮೇಲ್ದರ್ಜೆಗೇರಿಸಬಹುದಾಗಿದೆ ಎಂದು ಹೇಳಿದರು.
ಉಡುಪಿ ಶಾಸಕ ಯಶಪಾಲ್ ಸುವರ್ಣ ಮಾತನಾಡಿ, ಮೀನುಗಾರಿಕೆ ಮತ್ತು ಬಂದರು ಇಲಾಖೆಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಮೀನುಗಾರಿಕಾ ಬಂದರುಗಳ ಅಭಿವೃದ್ಧಿಗೆ ತೊಡಕಾಗುತ್ತಿದೆ. ಈ ಎರಡೂ ಇಲಾಖೆಗಳನ್ನು ವಿಲೀನಗೊಳಿಸಿ, ಇಂಜಿನಿಯರಿಂಗ್ ವಿಭಾಗವನ್ನು ಪ್ರಾರಂಭಿಸಬೇಕು. ಇದರಿಂದ ಬಂದರುಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ತ್ವರಿತಗೊಳಿಸಬಹುದು ಎಂದರು. ಅಳಿವೆಗಳ ಹೂಳೆತ್ತಲು ಡ್ರೆಜ್ಜಿಂಗ್ ಮಾಡಲು ಗುತ್ತಿಗೆ ಪ್ರಕ್ರಿಯೆ ವಿಳಂಭವಾಗುತ್ತಿದೆ. ಡ್ರೆಜ್ಜಿಂಗ್ ಗುತ್ತಿಗೆ ನೀಡುವ ಬದಲು ರಾಜ್ಯ ಸರಕಾರವೇ ಡ್ರೆಜ್ಜಿಂಗ್ ಯಂತ್ರ ಖರೀದಿಸಬೇಕು. ದೇಶದ ಪಶ್ಚಿಮ ಕರಾವಳಿಯಲ್ಲಿ ಸಮಾನ ಮೀನುಗಾರಿಕಾ ನೀತಿ ಜಾರಿಯಾಗಬೇಕು. ಪ್ರಸ್ತುತ ಮೀನುಗಾರಿಕೆ ರಜೆ ಸೇರಿದಂತೆ ಒಂದೊಂದು ರಾಜ್ಯದಲ್ಲಿ ವಿಭಿನ್ನ ನೀತಿಗಳಿದ್ದು, ಕರ್ನಾಟಕದ ಮೀನುಗಾರರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಅಡಿಕೆ ಬೆಳೆಗಾರರಿಗೆ ವಿಶೇಷ ಪ್ಯಾಕೇಜನ್ನು ಮುಂದಿನ ಬಜೆಟ್‍ನಲ್ಲಿ ಪ್ರಕಟಿಸಬೇಕು. ರಬ್ಬರ್ ಬೆಳೆಗೆ ನಿರ್ದಿಷ್ಟ ಸ್ಥಾನಮಾನ ನೀಡಬೇಕು. ಕಡವ ತಾ. ಕೊಲ್ಯದಲ್ಲಿ ನಿಮಿಸಿರುವ ಪಶುಸಂಗೋಪನಾ ಕಾಲೇಜಿಗೆ ಬೋಧಕ ಹುದ್ದೆಗಳನ್ನು ಮಂಜೂರುಗೊಳಿಸಬೇಕು ಎಂದರು. ಕಡಬ ತಾಲೂಕು ನಿರ್ಮಾಣಗೊಂಡು ಹಲವು ವರ್ಷಗಳಾಗಿದ್ದರೂ, ಇನ್ನೂ ಹಲವು ಇಲಾಖೆಗಳು ಬಂದಿರುವುದಿಲ್ಲ. ಸಾರ್ವಜನಿಕರು ದಾಖಲೆಗಳಿಗಾಗಿ ಪುತ್ತೂರಿಗೆ ತೆರಳಬೇಕಾಗಿದೆ ಎಂದರು.
ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಮಾತನಾಡಿ, ನಗರದಲ್ಲಿ ರಾಜಾ ಕಾಲುವೆಗಳು ನದಿ ಸೇರುವ ಸ್ಥಳಗಳಲ್ಲಿ ಡ್ರೆಜ್ಜಿಂಗ್ ಆಗದೇ, ಮಳೆಗಾಲದಲ್ಲಿ ನೆರೆ ಉಂಟಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ ಇದುÀಸಂಭವಿಸುತ್ತಿದ್ದು, ಇದಕ್ಕೆ ಪರಿಹಾರ ಕಲ್ಪಿಸಬೇಕು ಎಂದು ಹೇಳಿದರು.
ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್ ಪ್ರಾಸ್ತಾವಿಕವಾಗಿ ಮಾತನಾಡಿ, ಕರಾವಳಿಯ ಪ್ರಮಖ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಪ್ರಸ್ತಾವನೆ ಕಳುಹಿಸಲಾಗುವುದು. ಇಂದಿನ ಸಭೆಯ ಅಂಶಗಳನ್ನು ಮಂಡಳಿಯ ಕ್ರಿಯಾಯೋಜನೆಯಲ್ಲಿ ಸೇರಿಸಿ, ಅನುದಾನಕ್ಕೆ ಬೇಡಿಕೆ ಇಡಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಉಪಸ್ಥಿತರಿದ್ದರು. ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಡಿಸೋಜ, ಮಂಡಳಿಯ ಅಧಿಕಾರಿಗಳಾದ ಮಂಜುನಾಥ ಶೆಟ್ಟಿ, ಶ್ರೀಧರ್ ಟಿ.ಡಿ. ಮುಹಮ್ಮದ್ ತೌಸೀಫ್, ಹರಿಹರ ವಿ ಹರಿಕಾಂತ್, ಪವನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.