ಬೆಂಗಳೂರು, ಅಕ್ಟೋಬರ್ 12: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಭೆಗೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದ್ದರೂ, ಸಭೆಗೆ ಗೈರಾಗುವ ಮೂಲಕ ಬಿಜೆಪಿಯವರು ಬೆಂಗಳೂರಿನ ಅಭಿವೃದ್ಧಿಯ ವಿರೋಧಿಗಳೆಂದು ನಿರೂಪಿಸಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಜಿಬಿಎ ಸಭೆಗೆ ಬಿಜೆಪಿಯವರು ಗೈರಾಗಿದ್ದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಬಿಜೆಪಿಗರಿಗೆ ಬೆಂಗಳೂರಿನ ಬಗ್ಗೆ ಕಳಕಳಿಯಿದ್ದರೆ ಜಿಬಿಎ ಸಭೆಗೆ ಗೈರಾಗುತ್ತಿರಲಿಲ್ಲ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಎಂಬುದು ಪ್ರಜಾಪ್ರಭುತ್ವದ ವೇದಿಕೆಯಾಗಿದೆ. ಆಡಳಿತ ವಿಕೇಂದ್ರೀಕರಣಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಾರೆ ಎಂದು ತಿಳಿಯುತ್ತದೆ. ಬೆಂಗಳೂರು ಬೃಹತ್ ಆಗಿ ಬೆಳೆದಿದ್ದು, ಇಲ್ಲಿನ ಜನರಿಗೆ ಉತ್ತಮ ಆಡಳಿತ, ಸೌಲಭ್ಯಗಳನ್ನು ನೀಡಲು ನಗರವನ್ನು ವಿಭಜಿಸಲೇಬೇಕೆಂಬ ನಿಲುವನ್ನು ಪ್ರಥಮವಾಗಿ ಬಿಜೆಪಿಯವರೇ ಹೊಂದಿದ್ದರು . ಆದರೆ ಈಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯವರು ಪುನ: ಅಧಿಕಾರಕ್ಕೆ ಬರುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.