canaratvnews

*ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಸಮಾಜದಲ್ಲಿ ಅಸಮಾನತೆ ನೀಗಿಸುವವರೆಗೂ ಹೋರಾಟ, ಜನರ ಕೆಲಸ ಮಾಡುತ್ತೇನೆ*: ಮುಖ್ಯಮಂತ್ರಿ ಸಿದ್ದರಾಮಯ್ಯ.

ಮೈಸೂರು : ಜನವರಿ – 06: ಸಮಾಜದಲ್ಲಿ ಅಸಮಾನತೆ ಇನ್ನೂ ಜೀವಂತವಾಗಿದ್ದು, ಅಸಮಾನತೆ ಹೋಗುವವರೆಗೂ, ಎಲ್ಲರಿಗೂ ನ್ಯಾಯ ಸಿಗುವವರೆಗೂ ಹೋರಾಟ ಹಾಗೂ ಜನರ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಮೈಸೂರಿನ ತಮ್ಮ ನಿವಾಸದಲ್ಲಿ ಮಾಧ್ಯಮ ದವರೊಂದಿಗೆ ಮಾತನಾಡಿದರು.


ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರ ದಾಖಲೆಯನ್ನು ಸರಿಗಟ್ಟಿರುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ದಾಖಲೆಗಳನ್ನು ಮುರಿಯಲೆಂದು ರಾಜಕೀಯ ಮಾಡಿಲ್ಲ. ಈ ದಾಖಲೆ ಕಾಕತಾಳೀಯವಾಗಿ ಆಗಿದೆ. ದೇವರಾಜ ಅರಸು ಅವರು ಎಷ್ಟು ವರ್ಷ ಆಡಳಿತ ಮಾಡಿದ್ದಾರೆಂದು ತಿಳಿದಿರಲಿಲ್ಲ. ಜನರ ಆಶೀರ್ವಾದದಿಂದ ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಲು ಸಾಧ್ಯವಾಗಿದೆ ಎಂದರು.


*ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುವ ವಿಶ್ವಾಸವಿದೆ*
ಮುಖ್ಯಮಂತ್ರಿಯಾಗಿ ಅವಧಿಯನ್ನು ಪರಿಪೂರ್ಣ ಮಾಡುವ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ ಆ ಕುರಿತು ಪಕ್ಷದ ವರಿಷ್ಠರು ತೀರ್ಮಾನಿಸಬೇಕಿದೆ ಎಂದರು. ಮುಖ್ಯಮಂತ್ರಿಯಾಗಿ ಅವಧಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದರು.

ಮುಖ್ಯಮಂತ್ರಿಗಳ ಅಭಿಮಾನಿಗಳು ನಾಟಿ ಕೋಳಿ ಪಲಾವ್ ಹಂಚಿರುವ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ ನನಗೆ ಈ ಬಗ್ಗೆ ತಿಳಿದಿಲ್ಲ ಎಂದ ಮುಖ್ಯಮಂತ್ರಿಗಳು ಸಾಮಾನ್ಯವಾಗಿ ಹಳ್ಳಿಗಳಲ್ಲಿ ನೆಂಟರು ಬಂದಾಗ ಮಾತ್ರ ನಾಟಿ ಕೋಳಿ ಅಡುಗೆ ಮಾಡುತ್ತಾರೆ. ನಾನೂ ಹಳ್ಳಿಯವನಾಗಿರುವುದರಿಂದ ಸಹಜವಾಗಿ ನಾಟಿ ಕೋಳಿ, ರಾಗಿ ರಾಗಿ ಮುದ್ದೆ ತಿನ್ನುತ್ತಿದ್ದೆ. ಹಳ್ಳಿಯವರ ಊಟದ ಕ್ರಮ ಇದಾಗಿದ್ದು, ನಾನು ಮುಖ್ಯಮಂತ್ರಿಯಾಗಿರುವುದರಿಂದ ಸ್ವಲ್ಪ ಪ್ರಚಾರ ಸಿಗುತ್ತಿದೆ ಎಂದರು.

*ರಾಜಕಾರಣ ತೃಪ್ತಿ ತಂದಿದೆ*
ಇಷ್ಟು ವರ್ಷಗಳ ರಾಜಕಾರಣ ತೃಪ್ತಿ ತಂದಿದೆ ಎಂದ ಮುಖ್ಯಮಂತ್ರಿಗಳು ಜನರ ಕೆಲಸ ಮಾಡುವುದು ಖುಷಿಯ ಸಂಗತಿ ಎಂದರು. ರಾಜಕಾರಣ ಎಂದರೆ ಬಡವರು, ದಲಿತರು, ಹಿಂದುಳಿದವರ ಕೆಲಸ ಕೆಲಸ ಮಾಡಿಕೊಡುವುದು.
ಹೆಚ್ಚೆಂದರೆ ಶಾಸಕನಾಗಬೇಕೆಂದು ಅಂದುಕೊಂಡಿದ್ದೆ. ಶಾಸಕನಾದೆ, ಮಂತ್ರಿ, ಉಪಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಹಾಗೂ ಮುಖ್ಯಮಂತ್ರಿಯೂ ಆದೆ. ಅವಕಾಶಗಳು ಸಿಕ್ಕಿದ್ದರಿಂದ ಇವೆಲ್ಲ ಆಗಲು ಸಾಧ್ಯವಾಯಿತು ಎಂದರು.


ದೇವರಾಜ ಅರಸು ಹಾಗೂ ನಾನು ಇಬ್ಬರೂ ಮೈಸೂರಿನವರೇ ಆಗಿದ್ದು, ಇಬ್ಬರೂ ದೀರ್ಘಾವಧಿಯ ಮುಖ್ಯಮಂತ್ರಿಗಳಾಗಿದ್ದು ಕಾಲಘಟ್ಟ ಬೇರೆ ಬೇರೆ. 1972ರಿಂದ 80ವರೆಗೆ ಮುಖ್ಯಮಂತ್ರಿಯಾಗಿದ್ದರು. ನಾನು ಎರಡು ಅವಧಿಗೆ ಆಗಿದ್ದೇನೆ ಎಂದರು.
*ಬಜೆಟ್ ನಲ್ಲಿ ವಿಶೇಷ ಘೋಷಣೆ: ಕಾದು ನೋಡಿ*

ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಕಾರ್ಯಕ್ರಮಗಳ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಬಜೆಟ್ ಆಗುವವರೆಗೂ ಕಾದು ನೋಡಿ ಎಂದರು.
*ಬಳ್ಳಾರಿ ಘಟನೆ ಬಗ್ಗೆ ಗೃಹ ಸಚಿವರೊಂದಿಗೆ ಚರ್ಚೆ*
ಬಳ್ಳಾರಿ ಘಟನೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಈ ಬಗ್ಗೆ ಗೃಹ ಸಚಿವರೊಂದಿಗೆ ಮಾತನಾಡುತ್ತೇನೆ. ತನಿಖೆ ನಡೆಯುತ್ತಿದ್ದು, ಕೆಲವರನ್ನು ಬಂಧಿಸಲಾಗಿದೆ ಎಂದರು.

*ಎಚ್. ಡಿ ಕುಮಾರಸ್ವಾಮಿ ರಾಜಕೀಯವಾಗಿ ಮಾತನಾಡುತ್ತಾರೆ*
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಎಚ್. ಡಿ ಕುಮಾರಸ್ವಾಮಿ ಅವರು ಘಟನೆಯ ಬಗ್ಗೆ ಮಾಡಿರುವ ಆರೋಪಗಳ ಪ್ರತಿಕ್ರಿಯೆ ನೀಡಿ ಜೆಡಿಎಸ್ ಹಾಗೂ ಬಿಜೆಪಿ ಕಾನೂನಿನ ರೀತಿ ಮಾತನಾಡದೆ ರಾಜಕೀಯವಾಗಿ ಮಾತನಾಡುತ್ತಾರೆ ಎಂದರು.


*ಸೌಹಾರ್ದ ಭೇಟಿ*

ನಿನ್ನೆ ವೇಣುಗೋಪಾಲ್ ಅವರೊಂದಿಗೆ ನಡೆದ ಮಾತುಕತೆಯ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ವಯನಾಡಿನಿಂದ ಬೆಂಗಳೂರು ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಸೌಹಾರ್ದಯುತವಾಗಿ ಮೈಸೂರಿನಲ್ಲಿ ಭೇಟಿ ಮಾಡಲಾಯಿತು ಎಂದರು.

ಸಂಪುಟ ಪುನರ್ ರಚನೆಯ ಬಗ್ಗೆ ದೆಹಲಿಯಿಂದ ಕರೆ ಬಂದಾಗ ಮಾತನಾಡುವುದಾಗಿ ಸಿಎಂ ತಿಳಿಸಿದರು.

Share News
Exit mobile version