canaratvnews

ವೆನ್ಲಾಕ್‌ನಲ್ಲಿ ಕರುಣೆಯ ತೊಟ್ಟಿಲು ಉದ್ಘಾಟನೆ*

ಮಂಗಳೂರು: ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆ ಪಡೆಯಲು ದೂರದ ಊರುಗಳಿಂದ ಬರುವವರ ಅನುಕೂಲಕ್ಕಾಗಿ ಎಂಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ನಿಂದ ನಿರ್ಮಿಸಿದ ಕರುಣೆಯ ತೊಟ್ಟಿಲು- ಕ್ಲೋತ್ ಬ್ಯಾಂಕನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿ, ಶುಭ ಹಾರೈಸಿದರು.

ಎಂಫೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಚೈರ್‌ಮ್ಯಾನ್ ಝಕರಿಯಾ ಜೋಕಟ್ಟೆ ಮಾತನಾಡಿ, ಟ್ರಸ್ಟ್ ಸ್ಥಾಪನೆಯಾಗಿ ಸುಮಾರು 12 ವರ್ಷಗಳಾಗಿದ್ದು, ಎಂಟು ವರ್ಷಗಳಿಂದ ನಿರಂತರ ವೆನ್ಲಾಕ್ ಆಸ್ಪತ್ರೆ ಒಳರೋಗಿಗಳ ಜೊತೆಗಾರರಿಗೆ ರಾತ್ರಿಯ ಊಟ ವಿತರಿಸುತ್ತಿದೆ. ದಾನಿಗಳ ನೆರವು ಮತ್ತು ಟ್ರಸ್ಟಿಗಳ ಸಹಾಯದಿಂದ ನಡೆಯುವ ‘ಕಾರುಣ್ಯ ಯೋಜನೆ’ಯನ್ನು ನ.1ರಿಂದ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೂ ವಿಸ್ತರಿಸಲಾಗುತ್ತಿದೆ ಎಂದರು.

ಇದೀಗ ವೆನ್ಲಾಕ್ ಆಸ್ಪತ್ರೆಯಲ್ಲಿ ಹೊಸ ಕಲ್ಪನೆಯಾಗಿ ಕ್ಲೋತ್ ಬ್ಯಾಂಕ್ ಆರಂಭಿಸಲಾಗಿದೆ. ಸಾರ್ವಜನಿಕರು ಹೊಸದಾಗಿ ಖರೀದಿಸಿದ ಅಥವಾ ಬಳಕೆ ಮಾಡಿದ ಶುಭ್ರ ಬಟ್ಟೆಗಳನ್ನು ಇಲ್ಲಿ ತಂದು ಇಡಬಹುದು. ಇದನ್ನು ಅಗತ್ಯವಿರುವ ರೋಗಿಗಳು ಅಥವಾ ಅವರ ಜತೆಗಾರರು ಕೊಂಡೊಯ್ಯಲಿದ್ದಾರೆ ಎಂದು ಅವರು ಹೇಳಿದರು.

ಎಂಫ್ರೆಂಡ್ಸ್ ಸ್ಥಾಪಕ ರಶೀದ್ ವಿಟ್ಲ ಮಾತನಾಡಿ, ವೆನ್ಲಾಕ್ ಆಸ್ಪತ್ರೆಯ ಡಿಎಂಒ ಅವರ ಮನವಿ ಮೇರೆಗೆ ಕ್ಲೋತ್ ಬ್ಯಾಂಕ್ ಆರಂಭಿಸಿದ್ದು, ಅದರ ಖರ್ಚು ವೆಚ್ಚವನ್ನು ನಮ್ಮ ಟ್ರಸ್ಟಿ ಶರೀಫ್ ವೈಟ್‌ಸ್ಟೋನ್ ಭರಿಸಿದ್ದಾರೆ. ಜನರು ಉತ್ತಮ ದರ್ಜೆಯ ಬಟ್ಟೆ ತಂದು ಕೊಟ್ಟು ಸಹಕರಿಸಬೇಕು. ಇಲ್ಲಿಯ ಸಿಬ್ಬಂದಿ ಅಗತ್ಯವಿರುವವರಿಗೆ ವಿತರಿಸಲಿಸಲಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ವೆನ್‌ಲಾಕ್ ಆಸ್ಪತ್ರೆ ಅಧೀಕ್ಷಕ ಡಾ.ಡಿ.ಎಸ್. ಶಿವಪ್ರಕಾಶ್, ಆರ್‌ಎಂಒ ಡಾ.ಸುಧಾಕರ್, ಕೆಎಂಸಿ ಆಸ್ಪತ್ರೆ ಡೀನ್ ಡಾ.ಉನ್ನಿಕೃಷ್ಣನ್, ಜಿಪಂ ಮಾಜಿ ಸದಸ್ಯ ಶಾಹುಲ್ ಹಮೀದ್ ಕೆ.ಕೆ., ಮಾಜಿ ಕಾರ್ಪೊರೇಟರ್ ಎ.ಸಿ.ವಿನಯರಾಜ್, ಎಂಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ, ಟ್ರಸ್ಟಿಗಳಾದ ಮೊಹಮ್ಮದ್ ಹನೀಫ್ ಗೋಳ್ತಮಜಲು, ಅಬೂಬಕರ್ ಕೆ., ಅಬೂಬಕರ್ ಪುತ್ತು, ಅನ್ವರ್ ಹುಸೇನ್, ಇಬ್ರಾಹಿಂ ಮೊಯ್ದಿನಬ್ಬ ನಂದಾವರ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಸಲೀಂ ಮಕ್ಕಾ, ಡಿ.ಎಂ.ರಶೀದ್ ಮತ್ತಿತರರು ಉಪಸ್ಥಿತರಿದ್ದರು.

Share News
Exit mobile version