canaratvnews

*ಕ್ರಿಸ್ಮಸ್ ಸಂಭ್ರಮಾಚರಣೆಗೆ ನಾಡು ಸಜ್ಜು ಎಲ್ಲೆಲ್ಲೂ ಗೋದಲಿ, ನಕ್ಷತ್ರ, ಕ್ಯಾರಲ್ ಗಾಯನ*

ಮಂಗಳೂರು, ಡಿ.23: ಕ್ರಿಸ್ತ ಜನನದ ಸಂಭ್ರಮಕ್ಕೆ ಕೊನೇ ಹಂತದ ತಯಾರಿಗಳು ನಡೆಯುತ್ತಿವೆ. ಎಲ್ಲೆಲ್ಲೂ ಕ್ರಿಸ್ಮಸ್ ನ ಕಳೆ ಕಟ್ಟಿದೆ. ಕ್ರೈಸ್ತರು ವಿವಿಧ ರೀತಿಯ ತಯಾರಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ಇದರಲ್ಲಿ ಗೋದಲಿ ಪ್ರಮುಖವಾಗಿದೆ. ಕರಾವಳಿಯಾದ್ಯಂತ ಕಳೆದ ಒಂದೆರಡು ವಾರದಿಂದ ಗೋದಲಿ ನಿರ್ಮಾಣ ಕೆಲಸ ಆರಂಭಗೊಂಡಿದ್ದು, ಅಂತಿಮ ತಯಾರಿಯಲ್ಲಿ ಕ್ರೈಸ್ತರಿದ್ದಾರೆ.

ದೇವರ ಯೋಜನೆಯಂತೆ ದೇವ ಕುವರ ಯೇಸು ಕ್ರಿಸ್ತರು ಸರಳವಾಗಿ ಗೋದಲಿಯಲ್ಲಿ ಜನಿಸಿದರು. ಆ ಮೂಲಕ ಜಗತ್ತಿಗೆ ಶಾಂತಿದೂತನ ಆಗಮನವಾಯಿತು. ಜಗತ್ತಿನಲ್ಲಿ ಹೊಸ ಶಕೆಯೊಂದು ಶುರುವಾಯಿತು ಎಂಬುವುದು ಪವಿತ್ರ ಬೈಬಲ್ ನಲ್ಲಿರುವ ಉಕ್ತಿ. ಎರಡು ಸಾವಿರ ವರ್ಷಗಳ ಹಿಂದೆ ಗೋದಲಿಯಲ್ಲಿ ಜನಿಸಿದ ಕ್ರಿಸ್ತ ಶಿಲುಬೆ ಮರಣದ ವರೆಗೂ ವಿದೇಯತೆಯ ಸಂದೇಶವನ್ನೇ ಸಾರಿದರು. ಎರಡು ಸಾವಿರ ವರ್ಷಗಳ ಹಿಂದೆ ಕ್ರಿಸ್ತ ಜನನದ ಸಂದರ್ಭದಲ್ಲಿ ಇದ್ದ ಪರಿಸ್ಥಿತಿಗಿಂತಲೂ ಇಂದಿನ ಆಚರಣೆಗೆ ಸಾಕಷ್ಟು ವ್ಯತ್ಯಾಸಗಳಿವೆ.

ಎರಡು ಸಾವಿರ ವರ್ಷಗಳ ಹಿಂದೆ ಕ್ರಿಸ್ತ ಜನನದ ಸಂದರ್ಭ ಯಾವ ರೀತಿ ಇತ್ತು ಎಂಬವುದನ್ನು ಇಂದಿನ ಯುವ ಪೀಳಿಗೆಗೆ ಮನದಟ್ಟು ಮಾಡುವ ನಿಟ್ಟಿನಲ್ಲಿ ಗೋದಲಿ ನಿರ್ಮಿಸಲಾಗುತ್ತಿದ್ದು, ಗೋದಲಿಯಲ್ಲಿ ಸಂಪೂರ್ಣ ಊರೊಂದರ ಚಿತ್ರಣವಿರುತ್ತದೆ. ಹಳ್ಳಿಯ ಸೊಗಡು ಗೋದಲಿಯಲ್ಲಿ ಚಿತ್ರಣ

ಗೋದಲಿ ಎಂದಾಕ್ಷಣ ಅಲ್ಲಿ ಗೋವುಗಳು ಅಥವಾ ಕುರಿಗಳಿರುತ್ತವೆ. ಆದರೆ ಕ್ರಿಸ್ತ ಜನನದ ವೇಳೆ ಕ್ರೈಸ್ತರು ನಿರ್ಮಿಸುವ ಗೋದಲಿಯಲ್ಲಿ ಹಳ್ಳಿಯೊಂದನ್ನೇ ಬಿಂಬಿಸಲಾಗುತ್ತದೆ. ಬಾಲ ಏಸು ಜನಿಸಿದ ಜಾಗದೊಂದಿಗೆ, ಮಾತೆ ಮರಿಯ, ಜೋಸೆಫ್, ಜೋತಿಷಿಗಳು, ಕುರಿಗಳು, ಗೋವುಗಳು ಹಾಗೂ ಹಿಂದಿನ ಕಾಲದಲ್ಲಿ ಸಾಕುತ್ತಿದ್ದ ಪ್ರಾಣಿಗಳ ಪ್ರತಿಮೆಗಳು ಇರುತ್ತವೆ. ಮತ್ತೊಂದೆಡೆ ಭತ್ತ, ರಾಗಿ, ಗೋದಿ ಇತ್ಯಾದಿ ಗದ್ದೆ ತೋಟಗಳು, ಅಲ್ಲೊಂದು ಇಲ್ಲೊಂದು ಮನೆಯ ಪ್ರತಿಕೃತಿ, ಹರಿಯುವ ಹೊಳೆ, ಝರಿಯ ಪತ್ರಿರೂಪ ಹೀಗೆ ಗೋದಲಿಯಲ್ಲಿ ಹಳ್ಳಿಯ ಸೊಗಡು ತೆರೆದುಕೊಳ್ಳುತ್ತದೆ.

ಕ್ರಿಸ್ತ ಜನನ ಸಂದರ್ಭದಲ್ಲಿ ಆಕಾಶದಲ್ಲಿ ವಿಶಿಷ್ಟ ನಕ್ಷತ್ರವೊಂದು ಕಾಣಿಸಿಕೊಂಡಿದ್ದು, ಅದರ ಪ್ರತಿಕೃತಿಯಾಗಿ ನಕ್ಷತ್ರಗಳನ್ನು ಗೋದಲಿಯಲ್ಲಿ ಗಮನಿಸಬಹುದು.
1223ರಿಂದ ಗೋದಲಿ ನಿರ್ಮಾಣ ಆರಂಭ
ಯೇಸು ಕ್ರಿಸ್ತರ ಜನನದ ಕ್ಷಣವನ್ನು ನೆನಪಿಸಲು 1223ರಲ್ಲಿ ಇಟೆಲಿಯ ಸಂತ ಫ್ರಾನ್ಸಿಸ್ ಅಸಿಸಿ ಅವರು ಕ್ರಿಸ್ತ ಜನನವನ್ನು
ಸಾರುವ ಗೋದಲಿಯಂದನ್ನು(ಕ್ರಿಸ್ಮಸ್ ಕ್ರಿಬ್) ನಿರ್ಮಿಸಿದರು ಎಂದು ಇತಿಹಾಸ ಹೇಳುತ್ತದೆ. ತೆಂಗಿನ ಗರಿ ಅಥವಾ ಈಚಲು
ಮರದ ರೆಂಬೆಗಳನ್ನು ಬಳಸಿಕೊಂಡು ಗೋದಲಿ ತಯಾರಿಸಲು ಆರಂಭಿಸಿದ್ದು, ಬಳಿಕ ಜಾಗತಿಕವಾಗಿ ಗೋದಲಿ ರಚನೆ ಆರಂಭಗೊಂಡಿತು.

ಮನೆ ಮಂದಿಯ ಸಹಾಯಹಸ್ತ!
ಗೋದಲಿ ರಚಿಸಲು ಕನಿಷ್ಠ 15 ದಿನಗಳಿಂದ 1 ತಿಂಗಳ ಸಮಯಾವಕಾಶ ಬೇಕು. ಗ್ರಾಮೀಣ ಜನ ತಿಂಗಳ ಕಾಲ ಮನೆ ಮಂಡಿ ಜತೆಯಾಗಿ ಈ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಶಾಲೆಯಿಂದ ಬಂದ ಬಳಿಕ ಮಕ್ಕಳು, ಕೆಲಸ ಮುಗಿಸಿ ಬಂದ ಹಿರಿಯರು ಸೇರಿ ಗೋದಲಿ ನಿರ್ಮಿಸುತ್ತಾರೆ. ಚರ್ಚ್‌ಗಳಲ್ಲಿ ವಾರ್ಡ್‌ಗಳ ಸದಸ್ಯರು ಸೇರಿಕೊಂಡು ಈ ಕಾರ್ಯ ಮಾಡುತ್ತಾರೆ.

ಎಲ್ಲೆಲ್ಲೂ ಗೋದಲಿ ನಿರ್ಮಾಣ ಕಾರ್ಯ
ಕರಾವಳಿಯ ಎಲ್ಲಾ ಕೆಥೋಲಿಕ ಚರ್ಚ್ ಮುಂಭಾಗದಲ್ಲಿ ಗೋದಲಿಗಳನ್ನು ನಿರ್ಮಿಸಲಾಗುತ್ತದೆ. ಚರ್ಚ್ ನ ಯುವ ಸಂಘಟನೆ ಹಾಗೂ ವಿವಿಧ ವಾಳೆಯ ಸದಸ್ಯರು ಜತೆಯಾಗಿ ಸೇರಿಕೊಂಡು ಗೋದಲಿ ನಿರ್ಮಾಣ ಮಾಡುತ್ತಾರೆ. ಇದರೊಂದಿಗೆ ಮನೆಗಳಲ್ಲೂ ಕೂಡ ಗೋದಲಿ ನಿರ್ಮಾಣದ ಕೆಲಸಗಳಾಗುತ್ತಿವೆ.

ಹೆಚ್ಚಿನ ಜನ ಸಂಜೆ ಕೆಲಸ ಮುಗಿಸಿ ಮನೆಗೆ ಆಗಮಿಸಿ ಗೋದಲಿ ನಿರ್ಮಾಣ ಆರಂಭಿಸುತ್ತಿದ್ದು, ತಡರಾತ್ರಿಯವರೆಗೂ ತಯಾರಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.
ಆಧುನಿಕತೆಯೊಂದಿಗೆ ಸಂಪ್ರದಾಯ ಉಳಿಸುವ ಯತ್ನ ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕವಾಗಿ ಗೋದಲಿಯನ್ನು ತಯಾರಿಸಲಾಗುತ್ತಿತ್ತು. ಇಂದಿನ ಆಧುನಿಕ ಕಾಲ ಘಟ್ಟದಲ್ಲಿ ನವ ವಿಧಾನಗಳೊಂದಿಗೆ ಗೋದಲಿನಗಳ ನಿರ್ಮಾಣವಾಗುತ್ತಿವೆ. ಆದರೆ, ಗ್ರಾಮೀಣ ಭಾಗದಲ್ಲಿ ಇಂದಿಗೂ ಸಾಂಪ್ರದಾಯಿಕವಾಗಿ ಸ್ಥಳೀಯ ವಸ್ತುಗಳಿಂದಲೇ ಗೋದಲಿ ನಿರ್ಮಿಸುವುದು ಕಾಣಬಹುದು.

ನಗರದ ಹೆಚ್ಚಿನ ಜನ ಮಾರುಕಟ್ಟೆಯಲ್ಲಿ ಸಿಗುವ ಸಿದ್ಧಪಡಿಸಿರುವ ಗೋದಲಿಗಳನ್ನೇ ತಂದು ಶೃಂಗರಿಸುತ್ತಿದ್ದು, ಗೋದಲಿ ನಿರ್ಮಿಸುವ ಸಂಪ್ರದಾಯವನ್ನು ಜೀವಂತವಾಗಿಸಿದ್ದಾರೆ. ತಮ್ಮ ಒತ್ತಡದ ಜೀವನದ ನಡುವೆಯೂ ಗೋದಲಿ ನಿರ್ಮಾಣಕ್ಕೆ ಒಂದಿಷ್ಟು ಸಮಯ ನೀಡುತ್ತಿರುವುದು ಕ್ರೈಸ್ತರಿಗೆ ತಮ್ಮ ಆಚರಣೆಯ ಮೇಲೆ ಇರುವ ಗೌರವನ್ನು ತೋರಿಸುತ್ತಿದೆ.

Share News
Exit mobile version