canaratvnews

*ಕರಾವಳಿಯಲ್ಲಿ ಶ್ರದ್ಧಾ ಭಕ್ತಿಯಿಂದ ಕ್ರಿಸ್ಮಸ್ ಆಚರಣೆ*

ಮಂಗಳೂರು, ಡಿಸೆಂಬರ್ 24 : ಮಂಗಳೂರು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿರುವ ಚರ್ಚ್‌ಗಳು, ತಡ ರಾತ್ರಿ ವಿಶೇಷ ಪ್ರಾರ್ಥನೆ, ಬಲಿಪೂಜೆ. ಆಕರ್ಷಣೀಯ ಗೋದಲಿಗಳು, ಅವುಗಳ ಸುತ್ತ ನಕ್ಷತ್ರಗಳ ಮಿಂಚು!

ಏಸು ಕ್ರಿಸ್ತರ ಜನ್ಮ ಸ್ಮರಣೆಯ ಕ್ರಿಸ್ಮಸ್ ಹಬ್ಬವನ್ನು ಕ್ರೈಸ್ತ ಬಾಂಧವರು ಕರಾವಳಿಯಾದ್ಯಂತ ಬುಧವಾರ ರಾತ್ರಿ ಶ್ರದ್ಧಾಪೂರ್ವಕವಾಗಿ ಆಚರಿಸಿ ಸಂಭ್ರಮಿಸಿದರು.
ಮಧ್ಯರಾತ್ರಿ ವೇಳೆಯಲ್ಲಿ ಕ್ರಿಸ್ತ ಜನಿಸಿದ ಕ್ಷಣವನ್ನು ಸ್ಮರಿಸಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಸಂಪ್ರದಾಯವಿದ್ದು, ಸಹಸ್ರ ಸಂಖ್ಯೆಯಲ್ಲಿ ಕ್ರೈಸ್ತರು ಬಲಿಪೂಜೆಯಲ್ಲಿ ಭಾಗಿಗಳಾದರು.

ದ.ಕ. ಜಿಲ್ಲೆಯ ಮಂಗಳೂರು ಧರ್ಮಪ್ರಾಂತಕ್ಕೆ ಒಳಗೊಂಡ ವಿವಿಧ ಚರ್ಚ್‌ಗಳನ್ನು ವಿದ್ಯುದ್ದೀಪ ಗಳಿಂದ ಅಲಂಕರಿಸಲಾಗಿತ್ತು. ಕ್ರೈಸ್ತರ ಮನೆ, ಚರ್ಚ್‌ಗಳ ಆವರಣದಲ್ಲಿ ಗೋದಲಿ ನಿರ್ಮಿಸಲಾಗಿದೆ. ರಾತ್ರಿ ವೇಳೆ ಚರ್ಚ್‌ಗಳಲ್ಲಿ ಕ್ಯಾರೊಲ್ ಗಾಯನದ ಮೂಲಕ ಕ್ರಿಸ್ತ ಜನನ ಸ್ಮರಿಸಿ ಬಲಿಪೂಜೆ, ಪ್ರಾರ್ಥನೆ ನಡೆದವು. ಹಲವು ದಿನಗಳ ತಯಾರಿಯ ಮೂಲಕ ಸಡಗರದಿಂದ ಕ್ರಿಸ್ಮಸ್ ಆಚರಿಸಲಾಯಿತು.

ಮಂಗಳೂರು ಧರ್ಮಪ್ರಾಂತದ ಬಿಷಪ್ ರೈ| ರೆ| ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ರೊಸಾರಿಯೊ
ಕೆಥೆಡ್ರಲ್‌ನಲ್ಲಿ ಕ್ರಿಸ್ಮಸ್ ಹಬ್ಬದ ಬಲಿಪೂಜೆ ಅರ್ಪಿಸಿ ಕ್ರಿಸ್ತ
ಜನನದ ಮಹತ್ವ ಹಾಗೂ ಕ್ರಿಸ್ಮಸ್ ಸಂದೇಶ ನೀಡಿದರು.


ಬಂಟ್ವಾಳ ತಾಲೂಕಿನ ಪೆರುವಾಯಿ ಫಾತಿಮಾ ಮಾತೆ ಚರ್ಚಿನಲ್ಲಿ ಫಾದರ್ ಸೈಮನ್ ಡಿಸೋಜಾ ನೇತೃತ್ವದಲ್ಲಿ ಬಲಿ ಪೂಜೆ ನೆರವೇರಿತು. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಬಲಿಪೂಜೆಯಲ್ಲಿ ಭಾಗವಹಿಸಿದರು.
ಕ್ರಿಸ್ಮಸ್ ಹಿನ್ನೆಲೆಯಲ್ಲಿ ವಿದೇಶ, ದೂರದೂರುಗಳಲ್ಲಿರುವ ಕ್ರೈಸ್ತ ಬಾಂಧವರು ಊರಿಗೆ ಮರಳಿದ್ದು ಕುಟುಂಬದೊಂದಿಗೆ ಸೇರಿ ಹಬ್ಬ ಆಚರಣೆಯಲ್ಲಿ ತೊಡಗಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ಚರ್ಚ್ ಗಳಲ್ಲಿ ಎಂದಿಗಿಂತಲೂ ಹೆಚ್ಚಿನ ಜನಸ್ತೋಮವಿತ್ತು.

ಬಲಿಪೂಜೆಯ ಬಳಿಕ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡುವುದು ಕಂಡುಬಂತು.ಪೆರುವಾಯಿ ಕೆಥೋಲಿಕ್ ಸಭಾ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಮನೋರಂಜನ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು. ಚರ್ಚ್‌ಗಳಲ್ಲಿ ಹಬ್ಬದ ಬಲಿ ಪೂಜೆ, ಶುಭಾಶಯಗಳ ವಿನಿಮಯ ಮಾಡಲಾಯಿತು. ಮನೆಗಳಲ್ಲಿ ಕ್ರಿಸ್ಮಸ್ ವಿಶೇಷ ತಿಂಡಿ ತಿನಿಸು ‘ಕುಸ್ವಾರ್’ ತಯಾರಿಸಿ ನೆರೆಹೊರೆಯರೊಂದಿಗೆ ಹಂಚಿಕೊಳ್ಳುವುದು ಕಂಡುಬಂತು.

Share News
Exit mobile version