ಉಡುಪಿ: ಮುಸ್ಲಿಂ ಯುವಕನೋರ್ವ ಕ್ರೈಸ್ತ ಧರ್ಮದ ಯುವತಿಯನ್ನು ಅಪಹರಿಸಿದ್ದಾನೆ ಎಂದು ಯುವತಿಯ ತಂದೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿತ ಮುಸ್ಲಿಂ ಯುವಕ ಉಡುಪಿಯ ಉಪ ನೊಂದಾವಣಿ ಕಚೇರಿಯಲ್ಲಿ ವಿಶೇಷ ವಿವಾಹದಡಿ ಅರ್ಜಿ ಸಲ್ಲಿಸಿದ್ದಾರೆ.
ಉಡುಪಿಯ ಕರಂಬಳ್ಳಿ ನಿವಾಸಿ ಮೊಹಮ್ಮದ್ ಅಕ್ರಮ್ ಎಂಬಾತ ಮಾ. 20 ರಂದು ಕಾಲೇಜಿನಿಂದ ವಾಪಾಸು ಮನೆಗೆ ತೆರಳುತ್ತಿದ್ದಾಗ ಕ್ರೈಸ್ತ ಧರ್ಮಕ್ಕೆ ಸೇರಿದ ಯುವತಿಯ ಅಪಹರಣವಾಗಿದೆ ಎಂದು ತಂದೆ ಗಾಡ್ವಿನ್ ದೇವದಾಸ್ ಪೊಲೀಸರಿಗೆ ದೂರು ನೀಡಿದ್ದಾರೆ.
ಇದಾದ ಬೆನ್ನಲ್ಲೆ ಮಹಮ್ಮದ್ ಅಕ್ರಮ್ ಉಡುಪಿಯ ಉಪ ನೊಂದಾವಣಿ ಕಚೇರಿಯಲ್ಲಿ ಯುವತಿಯನ್ನು ವಿವಾಹವಾಗಲು ಅರ್ಜಿ ಸಲ್ಲಿಸಿದ್ದಾನೆ. ಮಗಳನ್ನು ನಮ್ಮ ವಶಕ್ಕೆ ನೀಡಲು ಪೊಲೀಸರು ನಿರ್ಲಕ್ಷ್ಯ ತೋರಿಸಿದ್ದು, ನನ್ನ ಮಗಳನ್ನು ಬೆದರಿಸಿ ಮಹಮ್ಮದ್ ಅಕ್ರಮ್ ವಿವಾಹ ಆಗಲು ಯತ್ನಿಸುತ್ತಿದ್ದಾನೆ. ಇಷ್ಟಾದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಯುವತಿ ತಂದೆ ಗಾಡ್ವಿನ್ ದೇವದಾಸ್ ಅವರು ಮೊಹಮ್ಮದ್ ಅಕ್ರಮ್ ವಿರುದ್ಧ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು. ಇದೇ ವಿಚಾರವಾಗಿ ಸೇಡು ತೀರಿಸಿಕೊಳ್ಳಲು ಮಹಮ್ಮದ್ ಅಕ್ರಮ್ ತನ್ನ ಮಗಳನ್ನು ಅಪಹರಿಸಿದ್ದಾಗಿ ಆರೋಪಿಸಿದ್ದಾರೆ.
“ಆರೋಪಿ ಅಕ್ರಂ ವಿರುದ್ಧ ಪೋಕ್ಸೋ ಕೇಸು ದಾಖಲಾಗಿತ್ತು”
“ನಮ್ಮ ಮಗಳು ಜೀನಾಳಿಗೆ ಅಪ್ರಾಪ್ತೆಯಾಗಿದ್ದಾಗಲೇ ಅಕ್ರಂ ಕಿರುಕುಳ ನೀಡುತ್ತಿದ್ದನು. ಐದು ವರ್ಷದ ಹಿಂದೆ ಈತನ ವಿರುದ್ಧ ಪೋಕ್ಸೋ ಕೇಸು ದಾಖಲು ಮಾಡಿದ್ದೆವು. ಲೈಂಗಿಕ ಕಿರುಕುಳ ನೀಡಿಲ್ಲ ಎಂಬ ಕಾರಣಕ್ಕೆ ಕೇಸು ವಜಾಗೊಂಡಿತ್ತು. ಇದೀಗ, ಅದೇ ಸೇಡು ತೀರಿಸಲು ಅಪಹರಿಸಿದ್ದಾನೆ” ಎಂದು ಪೋಷಕರಾದ ಮೇರುಸ್ ಪುಷ್ಪಲತಾ ಮತ್ತು ಗಾಡ್ವಿನ್ ದೇವದಾಸ್ ಆರೋಪಿಸಿದ್ದಾರೆ.
ಇನ್ಸ್ಟಾಗ್ರಾಮ್ ಮೂಲಕ ಐದು ವರ್ಷದಿಂದ ಪರಿಚಯವಾಗಿ, ಆಕೆಯನ್ನು ಪುಸಲಾಯಿಸಿ ಅಶ್ಲೀಲ ಫೋಟೋ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಧಮ್ಕಿ ಹಾಕಿದ್ದಾನೆ” ಎಂದು ಪೋಷಕರು ಆರೋಪಿಸಿದ್ದಾರೆ.
ಪೊಲೀಸರ ವಿರುದ್ಧ ಅಸಮಾಧಾನ
“ಅರೋಪಿ ಅಕ್ರಂ ಗರುಡ ಗ್ಯಾಂಗ್ನ ಸದಸ್ಯ ಎಂಬ ಮಾಹಿತಿ ಇದೆ. ಪೊಲೀಸರ ಬಳಿ ಹೋದರೆ, ಇಬ್ಬರೂ ವಯಸ್ಕರು, ಕ್ರಮ ಕೈಗೊಳ್ಳು ಸಾಧ್ಯವಿಲ್ಲ ಎನ್ನುತ್ತಾರೆ. ಇಬ್ಬರು ಜೊತೆಗೆ ಸುರಕ್ಷಿತವಾಗಿದ್ದಾರೆ ಎಂದು ವಿಡಿಯೋ ತೋರಿಸಿ ಪೊಲೀಸರು ನಮ್ಮನ್ನು ವಾಪಸ್ ಕಳುಹಿಸಿದ್ದಾರೆ ಎಂದು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆತ ಒಬ್ಬ ಡ್ರಗ್ಸ್ ವ್ಯಸನಿ ಆತನಿಗೆ ಯಾವುದೇ ಉದ್ಯೋಗವಿಲ್ಲ. ಮುಸ್ಲಿಮರೆಲ್ಲರೂ ಕೆಟ್ಟವರೆಂದು ಹೇಳುವುದಿಲ್ಲ. ಹಬ್ಬದ ಸಂದರ್ಭದಲ್ಲಿ ಹೀಗೆ ಮಾಡಬಹುದಾ? ಎಂದು ಇದೇ ವೇಳೆ ಪ್ರಶ್ನಿಸಿದ್ದಾರೆ.