ಸಂತಾ ಮದರ್ ತೆರೇಸಾ ವಿಚಾರ ವೇದಿಕೆ, ಮಂಗಳೂರು ಇವರ ಆಶ್ರಯದಲ್ಲಿ,ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮ 2025 ಹಬ್ಬವನ್ನು ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಪಟಾಕಿ ಸಿಡಿತ ಮತ್ತು ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಚಾಲನೆ ನೀಡಲಾಯಿತು

ಹಬ್ಬಗಳನ್ನು ಒಂದು ಕುಟುಂಬದಂತೆ ಒಟ್ಟಿಗೆ ಆಚರಿಸುವುದರಿಂದ ಸಮಾಜದಲ್ಲಿ ಶಾಂತಿ, ಗೌರವ ಮತ್ತು ಸಹೋದರತ್ವ ಬೆಳೆಯುತ್ತದೆ ಎಂದು ಸಂತಾ ಮದರ್ ತೆರೆಸಾ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಅಭಿಪ್ರಾಯ ವ್ಯಕ್ತಪಡಿಸಿದರು. ಮಾನವತೆಗೆ ಸೇವೆಯ ಮೂಲಕ ಪ್ರೀತಿಯನ್ನು ಹರಡುವ ಸಂತಾ ಮದರ್ ತೆರೆಸಾ ಅವರ ಮೌಲ್ಯಗಳನ್ನು ವಿಚಾರ ವೇದಿಕೆ ಕಳೆದ ಒಂಬತ್ತು ವರ್ಷಗಳಿಂದ ನಿಷ್ಠೆಯಿಂದ ಅನುಸರಿಸುತ್ತಿದೆ. ಕಾರ್ಯಕ್ರಮವು “ಎಲ್ಲಾ ಧರ್ಮಗಳ ಹಬ್ಬಗಳು ಎಲ್ಲರ ಹಬ್ಬಗಳಾಗಬೇಕು” ಎಂಬ ಥೀಮ್‌ನೊಂದಿಗೆ ಜನರ ನಡುವೆ ಏಕತೆ ಮತ್ತು ಸಹೋದರತ್ವವನ್ನು ಹರಡುವುದನ್ನು ಗುರಿಯಾಗಿಸಿಕೊಂಡಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ ಫಾ. ಜೆ. ಬಿ. ಸಲ್ದಾನ್ಹಾ ಅವರು, “ದೀಪಾವಳಿ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ, ಇದು ಧರ್ಮವನ್ನು ಮೀರಿಸಿ ಎಲ್ಲರನ್ನು ಒಗ್ಗೂಡಿಸುವ ಹಬ್ಬ” ಎಂದು ಹೇಳಿದರು. ಸಮಾಜದಲ್ಲಿ ಬೀರುವ ಅಂಧಕಾರಕ್ಕೆ ವಿರುದ್ಧವಾಗಿ ಪ್ರತಿಯೊಬ್ಬರೂ ದೀಪದಂತೆ ಪ್ರೀತಿ ಮತ್ತು ಭರವಸೆ ಹಂಚಿಕೊಳ್ಳಬೇಕೆಂದು ಒತ್ತಿ ಹೇಳಿದರು.

ಪ್ರಮುಖ ಅತಿಥಿಗಳಾಗಿ ಯೇನಪೋಯ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು ಡಾ. ಜೀವನ ರಾಜ್ ಕುಟ್ಟರ್, ನಿವೃತ್ತ ಸಾಮಾಜಿಕ ಕಲ್ಯಾಣಾಧಿಕಾರಿ ಯೂಸುಫ್ ಅಖ್ತರ್, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟೇನಿ ಆಲ್ವಾರೆಸ್ .ಮತ್ತು ಸ್ಟೇನಿ ಲೋಬೊ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉದಯೋನ್ಮುಖ ಗಾಯಕಿ ರಿಶಾಲ್ ಮೆಲ್ಬಾ ಕ್ರಾಸ್ಟಾ, ಅನಿವನ್ ಡಿಸೋಜಾ ಹಾಗೂ ಯೂಸುಫ್ ಅಖ್ತರ್ ಅವರನ್ನು ಸನ್ಮಾನಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಿಶಾಲ್ ಮೆಲ್ಬಾ ಕ್ರಾಸ್ಟಾ ಮತ್ತು ರೋನಿ ಕ್ರಾಸ್ಟಾ ಮನಸೂರೆಗೊಂಡ ಗಾನವನ್ನು ಪ್ರಸ್ತುತಪಡಿಸಿದರು. ಅನಿವನ್ ಡಿಸೋಜಾ ಅದ್ಭುತ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿದರು ಮಂಜುಳಾ ನಾಯಕ್ ಧನ್ಯವಾದ ಗೈದರು. ಮನೋಜ್ ಕುಮಾರ್ ಮತ್ತು ಡಾಲ್ಫಿ ಡಿಸೋಜಾ ಕಾರ್ಯಕ್ರಮವನ್ನು ನಿರ್ವಹಿಸಿದರು.


