ಮಂಗಳೂರು ಆಗಸ್ಟ್ 16: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದವರು ಶಾಂತಿ ಪ್ರೀಯರಾಗಿದ್ದು, ತಮ್ಮ ಧರ್ಮದ ಆಚರಣೆಗಳನ್ನು ದೇವಾಲಯಗಳಲ್ಲಿ ಹಾಗೂ ಮನೆಗಳಲ್ಲಿ ಮಾತ್ರ ನಡೆಸುತ್ತಾ ಬಂದಿದ್ದಾರೆ. ಇತರ ಧರ್ಮಗಳನ್ನು ಗೌರವಿಸುತ್ತಾ, ಸಾಮಾಜಿಕ, ಆರೋಗ್ಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಪಾರ ಕೊಡುಗೆಯನ್ನು ನೀಡುತ್ತಿರುವ ಕ್ರೈಸ್ತ ಸಮುದಾಯವು ಇತ್ತೀಚೆಗೆ ಮಾಜಿ ಕೇಂದ್ರ ಸಚಿವ ಹಾಗೂ ಮಾಜಿ ಲೋಕಸಭಾ ಸದಸ್ಯರಾದ ಜನಾರ್ಧನ ಪೂಜಾರಿಯವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಥೊಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜೆ ಇವರ ನೇತೃತ್ವದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪೂಜಾರಿಯವರು ದಕ್ಷಿಣ ಕನ್ನಡದಲ್ಲಿ ನಡೆದ ಘಟನೆಯ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡದೇ, “ಕ್ರೈಸ್ತ ಚರ್ಚುಗಳಲ್ಲಿ ಶವಗಳನ್ನು ಹೂತಿಲ್ಲವಲ್ಲವೇ, ಹೂತಿದ್ದೀರಾ?” ಎಂಬ ಪ್ರಶ್ನೆ ಕೇಳಿರುವುದನ್ನು ಕ್ರೈಸ್ತ ಸಮುದಾಯ ತೀವ್ರವಾಗಿ ಖಂಡಿಸುತ್ತದೆ.
ಸಮುದಾಯದವರು ಸ್ಪಷ್ಟಪಡಿಸಿರುವಂತೆ ಕ್ರೈಸ್ತರಲ್ಲಿ ದಫನ ಕ್ರಿಯೆ ಅತ್ಯಂತ ಪಾವಿತ್ರ್ಯದಿಂದ, ಕಾನೂನುಬದ್ಧವಾಗಿ ಹಾಗೂ ಚರ್ಚ್ ಆವರಣದಲ್ಲಿಯೇ ನಡೆಯುತ್ತದೆ. ಮರಣ ಹೊಂದಿದವರ ದಾಖಲೆಗಳು ಚರ್ಚ್ ಕಚೇರಿಯ ಪುಸ್ತಕದಲ್ಲಿ ನಿಖರವಾಗಿ ಸಂಗ್ರಹವಾಗುತ್ತವೆ. ಕಳೆದ 50 ವರ್ಷಗಳಿಂದ ನಿಗದಿತ ದಫನ ಭೂಮಿಯಲ್ಲೇ ಶವ ಸಂಸ್ಕಾರ ನಡೆಯುತ್ತಿದ್ದು, ಚರ್ಚ್ ಹೊರಗೆ ಯಾವುದೇ ಅಕ್ರಮ ದಫನ ನಡೆದಿಲ್ಲ. ಜನಾರ್ಧನ ಪೂಜಾರಿಯವರ ಹೇಳಿಕೆ ಕ್ರೈಸ್ತ ಸಮುದಾಯಕ್ಕೆ ನೋವುಂಟು ಮಾಡಿದ್ದು, ಇದನ್ನು ಕಥೋಲಿಕ್ ಸಭಾ ಮಂಗಳೂರು ಪ್ರದೇಶ್ (ರಿ.) ಅಧಿಕೃತವಾಗಿ ಖಂಡಿಸುತ್ತದೆ
ಪತ್ರಿಕಾ ಗೋಷ್ಠಿಯಲ್ಲಿ ನಿಕಟ ಪೂರ್ವ ಅಧ್ಯಕ್ಷ ಹಾಗೂ AICU ರಾಜಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್, ಸಂಘಟನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಹಾಗೂ ಮಾಜಿ ಅಧ್ಯಕ್ಷ ಪಾಮ್ಸ್ ರೋಲ್ಪಿ ಡಿಕೋಸ್ತಾ ಮತ್ತು ಸ್ಪ್ಯಾನಿ ಲೋಬೊ ಪ್ರಧಾನ ಕಾರ್ಯದರ್ಶಿ ವಿಲ್ಮಾ ಮೊಂತೇರೊ, ಸಹ ಕಾರ್ಯದರ್ಶಿ ಆಲ್ವಿನ್ ರೊಡ್ರಿಗಸ್, ಅಂತರ್ ಧರ್ಮೀಯ ಸಮಿತಿ ಸಂಚಾಲಕ ಅರುಣ್ ಡಿಸೋಜ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.