• Home  
  • *ಗಲ್ಫ್‌ ರಾಷ್ಟ್ರಗಳಲ್ಲಿ ಕರಾವಳಿ ಯುವಕರ ಸಂಕಷ್ಟ. ವಂಚಕ ಉದ್ಯೋಗ ಏಜೆನ್ಸಿಗಳ ಕಡಿವಾಣಕ್ಕೆ ವಿದೇಶಾಂಗ ಸಚಿವ ಜೈಶಂಕರ್‌ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ*
- DAKSHINA KANNADA - HOME - NATIONAL

*ಗಲ್ಫ್‌ ರಾಷ್ಟ್ರಗಳಲ್ಲಿ ಕರಾವಳಿ ಯುವಕರ ಸಂಕಷ್ಟ. ವಂಚಕ ಉದ್ಯೋಗ ಏಜೆನ್ಸಿಗಳ ಕಡಿವಾಣಕ್ಕೆ ವಿದೇಶಾಂಗ ಸಚಿವ ಜೈಶಂಕರ್‌ಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಒತ್ತಾಯ*

ನವದೆಹಲಿ: ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಯುವಕರು ನಕಲಿ ಉದ್ಯೋಗ ನೇಮಕ ಏಜೆನ್ಸಿಗಳ ಮೂಲಕ ಗಲ್ಫ್‌ ಹಾಗೂ ದಕ್ಷಿಣ ಏಷ್ಯಾ ದೇಶಗಳಿಗೆ ತೆರಳಿ ಅಲ್ಲಿ ಮೋಸ ಹೋಗಿ ಸಂಕಷ್ಟಕ್ಕೆ ಸಿಲುಕಿರುವ ಅತ್ಯಂತ ಗಂಭೀರ ವಿಚಾರವಾಗಿದ್ದು, ಇಂಥಹ ಪ್ರಕರಣ ದೇಶದೆಲ್ಲೆಡೆ ಜಾಸ್ತಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುವ ಭಾರತೀಯ ನಾಗರಿಕರ ಸುರಕ್ಷತೆ ಹೆಚ್ಚಿಸಲು ಜಾಗೃತಿ ಮೂಡಿಸುವ ಜತೆಗೆ ವಂಚನೆ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ದಕ್ಷಿಣ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ವಿದೇಶಾಂಗ ಸಚಿವ […]

Share News

ನವದೆಹಲಿ: ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಯುವಕರು ನಕಲಿ ಉದ್ಯೋಗ ನೇಮಕ ಏಜೆನ್ಸಿಗಳ ಮೂಲಕ ಗಲ್ಫ್‌ ಹಾಗೂ ದಕ್ಷಿಣ ಏಷ್ಯಾ ದೇಶಗಳಿಗೆ ತೆರಳಿ ಅಲ್ಲಿ ಮೋಸ ಹೋಗಿ ಸಂಕಷ್ಟಕ್ಕೆ ಸಿಲುಕಿರುವ ಅತ್ಯಂತ ಗಂಭೀರ ವಿಚಾರವಾಗಿದ್ದು, ಇಂಥಹ ಪ್ರಕರಣ ದೇಶದೆಲ್ಲೆಡೆ ಜಾಸ್ತಿಯಾಗುತ್ತಿದೆ. ಈ ಹಿನ್ನಲೆಯಲ್ಲಿ ಉದ್ಯೋಗಕ್ಕಾಗಿ ವಿದೇಶಗಳಿಗೆ ತೆರಳುವ ಭಾರತೀಯ ನಾಗರಿಕರ ಸುರಕ್ಷತೆ ಹೆಚ್ಚಿಸಲು ಜಾಗೃತಿ ಮೂಡಿಸುವ ಜತೆಗೆ ವಂಚನೆ ತಡೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೋರಿ ದಕ್ಷಿಣ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.


ನವದೆಹಲಿಯಲ್ಲಿ ಇಂದು ಸಚಿವರನ್ನು ಭೇಟಿಯಾಗಿ ಸುದೀರ್ಘ ಮಾತುಕತೆ ನಡೆಸಿರುವ ಕ್ಯಾ. ಚೌಟ ಅವರು, ಮಂಗಳೂರು ಹಾಗೂ ಕರಾವಳಿ ಕರ್ನಾಟಕದ ಯುವ ಜನರು ಉದ್ಯೋಗ ಪಡೆಯುವ ಕನಸಿನೊಂದಿಗೆ ಗಲ್ಫ್‌ ಹಾಗೂ ದಕ್ಷಿಣ ಏಷ್ಯಾ ದೇಶಗಳಿಗೆ ತೆರಳುತ್ತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಅನೇಕ ಸಂದರ್ಭಗಳಲ್ಲಿ ನಕಲಿ ಅಥವಾ ವಂಚಕ ಉದ್ಯೋಗ ನೇಮಕ ಏಜೆನ್ಸಿಗಳ ಮೂಲಕ ವಿದೇಶಕ್ಕೆ ತೆರಳಿದ ಬಳಿಕ ಅಲ್ಲಿ ಸೈಬರ್ ವಂಚಕರ ಬಲೆಗೆ ಸಿಲುಕುತ್ತಿರುವ, ಉದ್ಯೋಗವಿಲ್ಲದೆ ಅಥವಾ ನಿರೀಕ್ಷಿತ ಕೆಲಸ ಸಿಗದೆ ಸಂಕಷ್ಟದಲ್ಲಿ ಸಿಲುಕಿಕೊಂಡಿರುವ ಬಗ್ಗೆ ದೂರುಗಳು ಬರುತ್ತಿವೆ. ಹೀಗಾಗಿ, ಈ ವಂಚಕ ಜಾಲಕ್ಕೆ ಕಡಿವಾಣ ಹಾಕುವುದಕ್ಕೆ ಅಗತ್ಯ ಕ್ರಮಗಳನ್ನು ಸಚಿವಾಲಯದ ಮೂಲಕ ಜರುಗಿಸಬೇಕು. ಇಂಥಹ ನಕಲಿ ಏಜೆನ್ಸಿಗಳ ಬಗ್ಗೆಯೂ ಜನರಲ್ಲಿಯೂ ಪೂರ್ವ-ಪ್ರಯಾಣ ಸಮಾಲೋಚನೆ(‘ಪ್ರಿ-ಡಿಪಾರ್ಚರ್ ಕೌನ್ಸೆಲಿಂಗ್), ನಕಲಿ ಏಜೆನ್ಸಿಗಳ ಬಗ್ಗೆ ಜಾಗೃತಿ ಅಭಿಯಾನಗಳು ಹಾಗೂ ನೇಮಕಾತಿ ಸಂಸ್ಥೆಗಳೊಂದಿಗೆ ಸಮನ್ವಯವನ್ನು ಬಲಪಡಿಸುವ ಬಗ್ಗೆ ಸಚಿವಾಲಯ ಗಮನಹರಿಸಬೇಕು. ಅಲ್ಲದೆ, ಅಪಾಯ ಹೆಚ್ಚಿರುವ ದೇಶಗಳಲ್ಲಿ ಹೆಚ್ಚುವರಿ ಮೇಲ್ವಿಚಾರಣಾ ವ್ಯವಸ್ಥೆ ಬಲಪಡಿಸಬೇಕೆಂದು ಅವರು ಸಚಿವರಲ್ಲಿ ಮನವಿ ಮಾಡಿದ್ದಾರೆ.


ಇತ್ತೀಚೆಗೆ ಮಂಗಳೂರು ಸೇರಿದಂತೆ ಕರ್ನಾಟಕದ ಹಲವು ಯುವಕರು ಕಾಂಬೋಡಿಯಾ ದೇಶಕ್ಕೆ ತೆರಳಿ ಅಲ್ಲಿ ಸೈಬರ್‌ ವಂಚಕರ ಜಾಲದಲ್ಲಿ ಸಿಲುಕಿ ಸಾಕಷ್ಟು ತೊಂದರೆ ಅನುಭವಿಸಿದ್ದರು. ಕೊನೆಗೆ ವಿದೇಶಾಂಗ ಸಚಿವಾಲಯದ ಮಧ್ಯಸ್ಥಿಕೆ ಹಾಗೂ ನಿರಂತರ ಫಾಲೋಅಪ್‌ನಿಂದಾಗಿ ಮಂಗಳೂರಿನ ಐವರು ಯುವಕರನ್ನು ಕಾಂಬೋಡಿಯಾದ ನರಕಯಾತನೆ ಪರಿಸ್ಥಿತಿಯಿಂದ ರಕ್ಷಿಸಿ ಸುರಕ್ಷಿತವಾಗಿ ತಾಯ್ನಾಡಿಗೆ ವಾಪಾಸ್‌ ಕರೆತರುವುದಕ್ಕೆ ಸಾಧ್ಯವಾಗಿದೆ. ಈ ಬಗ್ಗೆ ಸಂತ್ರಸ್ತರು ಹಾಗೂ ಅವರ ಕುಟುಂಬಸ್ಥರು ಅನುಭವಿಸಿದ ಯಾತನೆ-ನೋವು ತೋಡಿಕೊಂಡಿರುವುದನ್ನು ಕ್ಯಾ. ಚೌಟ ಅವರು ಸಚಿವರ ಗಮನಕ್ಕೆ ತಂದಿದ್ದಾರೆ.


ವಿಶೇಷವಾಗಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದ ಯುವಕರು ಉದ್ಯೋಗದ ನಿರೀಕ್ಷೆಯಲ್ಲಿ ಗಲ್ಫ್‌ ದೇಶಗಳಿಗೆ ತೆರಳಿ ಅಲ್ಲಿ ಮೋಸ ಹೋಗುತ್ತಿರುವ ಸಂಖ್ಯೆ ಜಾಸ್ತಿಯಾಗುತ್ತಿದ್ದು ಇದು ಗಂಭೀರ ವಿಚಾರವಾಗಿದೆ. ಇಂತಹ ಅನೇಕ ಪ್ರಕರಣ ತಮ್ಮ ಬಂಧುಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆತರಲು ಅವರ ಕುಟುಂಬಸ್ಥರು ನಿರಂತರವಾಗಿ ವಿನಂತಿ ಸಲ್ಲಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಜತೆಗೆ ನಕಲಿ ಏಜೆನ್ಸಿಗಳ ನಿಯಂತ್ರಣಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಚಿವರಲ್ಲಿ ಮನವಿ ಮಾಡಿದ್ದಾರೆ. ಸಂಸದರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಡಾ. ಎಸ್. ಜೈಶಂಕರ್ ಅವರು, ವಿದೇಶದಲ್ಲಿರುವ ಭಾರತೀಯರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ನಮ್ಮ ಭಾಗದ ಯುವಕರು ವಿದೇಶಕ್ಕೆ ಉದ್ಯೋಗದ ಕನಸು ಹೊತ್ತು ಹೋಗಿ ಅಲ್ಲಿ ನರಕಯಾತನೆ ಅನುಭವಿಸುತ್ತಿರುವುದು ಅತ್ಯಂತ ನೋವಿನ ವಿಚಾರ. ಮಂಗಳೂರು ಸೇರಿದಂತೆ ಕರಾವಳಿ ಕರ್ನಾಟಕದಿಂದ ಗಲ್ಫ್‌ಗೆ ಉದ್ಯೋಗ ಹುಡುಕಿಕೊಂಡು ಹೋಗುವವರು ತಮ್ಮನ್ನು ಕರೆದೊಯ್ಯುವ ನೇಮಕ ಏಜೆನ್ಸಿಗಳ ಪೂರ್ವ-ಪರ ಸರಿಯಾಗಿ ಪರಿಶೀಲಿಸಬೇಕು. ಯಾವುದೇ ಕಾರಣಕ್ಕೂ ನಕಲಿ ಏಜೆನ್ಸಿಗಳಿಂದ ಮೋಸ ಹೋಗದಂತೆ ಎಚ್ಚರಿಕೆ ವಹಿಸಬೇಕು. ಏಜೆನ್ಸಿಗಳ ಮಾತು ನಂಬಿ ವಿದೇಶಕ್ಕೆ ಹೋಗಿ ಸರಿಯಾದ ಉದ್ಯೋಗವೂ ದೊರೆಯದೆ ನರಕಯಾತನೆ ಅನುಭವಿಸುವ ಬದಲು ಅಲ್ಲಿಗೆ ಹೋಗುವ ಮೊದಲೇ ಆ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕೆಂದು ಕ್ಯಾ. ಚೌಟ ಸಲಹೆ ನೀಡಿದ್ದಾರೆ.

*ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಸಮಾವೇಶಕ್ಕೆ ಪ್ರಸ್ತಾವನೆ*

ಇದೇ ಸಂದರ್ಭದಲ್ಲಿ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಆಶ್ರಯದಲ್ಲಿ ಮಂಗಳೂರಿನಲ್ಲಿ ತಂತ್ರಜ್ಞಾನ, ಪ್ರವಾಸೋದ್ಯಮ ಮತ್ತು ವ್ಯಾಪಾರ ಕ್ಷೇತ್ರಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಸಮಾವೇಶವನ್ನು ಆಯೋಜಿಸುವ ಕುರಿತು ಕ್ಯಾ. ಚೌಟ ಅವರು ಸಚಿವರಿಗೆ ಪ್ರಸ್ತಾವನೆ ಸಲ್ಲಿಸಿದರು. ನಮ್ಮ ಕರಾವಳಿ ಪ್ರದೇಶದ ಜಾಗತಿಕ ಸಂಪರ್ಕವನ್ನು ಬಲಪಡಿಸುವುದು, ಹೂಡಿಕೆ ಹಾಗೂ ಉದ್ಯಮಗಳನ್ನು ಉತ್ತೇಜಿಸುವ ಕುರಿತು ಅವರು ಸಚಿವರೊಂದಿಗೆ ಚರ್ಚಿಸಿದರು. ಅಲ್ಲದೆ, ವಿದೇಶಗಳಲ್ಲಿರುವ ನಮ್ಮ ಕರಾವಳಿಯ ಪ್ರತಿಭೆಗಳು ಹಾಗೂ ನವೀನ ನಾಯಕತ್ವವನ್ನು ಮರಳಿ ತಾಯ್ನಾಡಿಗೆ ತರುವ ಬ್ಯಾಕ್ ಟು ಊರು ಅಭಿಯಾನಕ್ಕೆ ಸಚಿವರ ಮಾರ್ಗದರ್ಶನ ಮತ್ತು ಬೆಂಬಲವನ್ನು ಇದೇ ವೇಳೆ ಕೋರಿದ್ದಾರೆ.

Share News