• Home  
  • *ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ: ರಾಜಹಂಸ ಬಸ್ – ಕಾರು ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು*
- DAKSHINA KANNADA - HOME

*ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ: ರಾಜಹಂಸ ಬಸ್ – ಕಾರು ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು*

ನೆಲ್ಯಾಡಿ: ಮಾ .13: ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಬರ್ಚಿನಹಳ್ಳಿ ಬಳಿ ಶುಕ್ರವಾರ ಮಧ್ಯಾಹ್ನ ರಾಜಹಂಸ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಸಕಲೇಶಪುರದ ಬಳಿ ನಡೆದ ಮದುವೆಯ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಸನದಿಂದ ಉಜಿರೆ ಕಡೆಗೆ ನಾಲ್ವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಧರ್ಮಸ್ಥಳದಿಂದ ಬೆಂಗಳೂರಿನ ಮೂಲಕ ತಿರುಪತಿಗೆ ತೆರಳುತ್ತಿದ್ದ ರಾಜಹಂಸ ಬಸ್ ನಡುವೆ ಬರ್ಚಿನಹಳ್ಳಿ ಸಮೀಪ ಈ ದುರ್ಘಟನೆ ಸಂಭವಿಸಿದೆ. […]

Share News

ನೆಲ್ಯಾಡಿ: ಮಾ .13: ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಬರ್ಚಿನಹಳ್ಳಿ ಬಳಿ ಶುಕ್ರವಾರ ಮಧ್ಯಾಹ್ನ ರಾಜಹಂಸ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.


ಸಕಲೇಶಪುರದ ಬಳಿ ನಡೆದ ಮದುವೆಯ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಸನದಿಂದ ಉಜಿರೆ ಕಡೆಗೆ ನಾಲ್ವರು ಪ್ರಯಾಣಿಸುತ್ತಿದ್ದ ಕಾರು ಹಾಗೂ ಧರ್ಮಸ್ಥಳದಿಂದ ಬೆಂಗಳೂರಿನ ಮೂಲಕ ತಿರುಪತಿಗೆ ತೆರಳುತ್ತಿದ್ದ ರಾಜಹಂಸ ಬಸ್ ನಡುವೆ ಬರ್ಚಿನಹಳ್ಳಿ ಸಮೀಪ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ಜಖಂಗೊಂಡಿದ್ದು

ಕಾರಿನಲ್ಲಿ ಇದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಕೊಕ್ಕಡದಲ್ಲಿ ಕಾರ್ಯಾಚರಿಸುತ್ತಿರುವ ಎಸ್.ಆರ್. ಆಯಿಲ್ ಮಿಲ್ ಉದ್ಯಮಿ ಹಾಗೂ ಶಿಶಿಲ ಧರ್ಮದಕಳ ನಿವಾಸಿ ಚಂದ್ರಶೇಖರ ಗೌಡ (56), ಉಜಿರೆ ಗ್ರಾಮದ ಮರಕಡ ನಿವಾಸಿ ಹಾಗೂ ಕಕ್ಕಿಂಜೆ ಮಲ್ನಾಡ್ ಫೈನಾನ್ಸ್ ಮಾಲಕರಾಗಿರುವ ಕಾರು ಚಾಲಕ ಶ್ರೀಧರ ಗೌಡ (61), ಹಾಗೂ ಉಜಿರೆ ಗ್ರಾಮದ ಗುರಿಪಳ್ಳ ನಿವಾಸಿ ಜನಾರ್ಧನ ಗೌಡ ಯಾನೆ ಉಮೇಶ್ ಗೌಡ (54) ಎಂದು ಗುರುತಿಸಲಾಗಿದೆ.


ಇದೇ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಉಜಿರೆ ಗ್ರಾಮದ ಕೂಡಿಗೆ ನಿವಾಸಿ ಸುರೇಶ್ (60) ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಧರ್ಮಸ್ಥಳದಿಂದ ಬೆಂಗಳೂರಿನ ಮೂಲಕ ತಿರುಪತಿಗೆ ತೆರಳುತ್ತಿದ್ದ ರಾಜಹಂಸ ಬಸ್ ಅನ್ನು ಚಾಲಕ ಗುಂಡಪ್ಪ ಚಲಾಯಿಸುತ್ತಿದ್ದು, ನಿರ್ವಾಹಕರಾಗಿ ಪ್ರದೀಪ್ ಕರ್ತವ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸಾಮಾನ್ಯವಾಗಿ ರಸ್ತೆ ಅಪಘಾತಗಳು ಸಂಜೆ ಅಥವಾ ಬೆಳಗಿನ ಜಾವದಲ್ಲಿ ಹೆಚ್ಚಾಗಿ ಸಂಭವಿಸುವುದು ಕಂಡುಬರುತ್ತದೆ. ಆದರೆ ಮಧ್ಯಾಹ್ನದ ವೇಳೆ ಸಂಭವಿಸಿದ ಈ ಭೀಕರ ಅಪಘಾತ ಸಾರ್ವಜನಿಕರಲ್ಲಿ ಬೆಚ್ಚಿಬೀಳುವಂತಾಗಿದೆ. ಘಟನೆ ನಡೆದ ಸ್ಥಳದಲ್ಲಿ ರಸ್ತೆ ನೇರವಾಗಿದ್ದು ಹಾಗೂ ಸಾಕಷ್ಟು ಅಗಲವಿರುವುದರಿಂದ ಯಾವುದೇ ರೀತಿಯ ಟ್ರಾಫಿಕ್ ಗೊಂದಲ ಉಂಟಾಗಲಿಲ್ಲ ಎಂದು ತಿಳಿದುಬಂದಿದೆ.


ಮೃತ ಚಂದ್ರಶೇಖರ ಗೌಡ ಅವರು ಕೊಕ್ಕಡದಲ್ಲಿ “ಎಸ್.ಆರ್. ಆಯಿಲ್ ಮಿಲ್” ಉದ್ಯಮವನ್ನು ನಡೆಸುತ್ತಿದ್ದು, ಸಮಾಜ ಸೇವೆಯಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಅವರು ಪಟ್ಟೂರು ಶ್ರೀರಾಮ ವಿದ್ಯಾಸಂಸ್ಥೆಯ ಅಧ್ಯಕ್ಷರಾಗಿಯೂ, ಶಿಶಿಲ ಶಿಶಿಲೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಇವರ ಪತ್ನಿ ಚೇತನ ಅವರು ಮಾಜಿ ತಾಲೂಕು ಪಂಚಾಯತ್ ಸದಸ್ಯೆಯಾಗಿದ್ದು, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮೃತ ಶ್ರೀಧರ ಗೌಡ ಅವರು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಪ್ರದೇಶದಲ್ಲಿ “ಮಲ್ನಾಡ್ ಫೈನಾನ್ಸ್” ಉದ್ಯಮವನ್ನು ನಡೆಸುತ್ತಿದ್ದು, ಹಲವು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿ ಸಮಾಜದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದರು. ಇವರಿಗೆ ಪತ್ನಿ ಹಾಗೂ ಓರ್ವ ಪುತ್ರ, ಓರ್ವ ಪುತ್ರಿ ಇದ್ದಾರೆ.
ಮೃತ ಜನಾರ್ಧನ ಗೌಡ ಯಾನೆ ಉಮೇಶ್ ಗೌಡ ಅವರು ಕೃಷಿಕರಾಗಿದ್ದು, ಜೊತೆಗೆ ಆಟೋ ಚಾಲಕರಾಗಿಯೂ ಜೀವನ ಸಾಗಿಸುತ್ತಿದ್ದರು. ಇವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಹಾಗೂ ಸ್ಥಳೀಯರು ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.ಮೃತ ದೇಹವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News