• Home  
  • ಕೆಎಸ್‌ಆರ್‌ಟಿಸಿ – ಖಾಸಗಿ ಬಸ್ ನಡುವೆ ಭೀಕರ ಅಪಘಾತ: 40ಕ್ಕೂ ಹೆಚ್ಚು ಮಂದಿಗೆ ಗಾಯ
- HOME - LATEST NEWS

ಕೆಎಸ್‌ಆರ್‌ಟಿಸಿ – ಖಾಸಗಿ ಬಸ್ ನಡುವೆ ಭೀಕರ ಅಪಘಾತ: 40ಕ್ಕೂ ಹೆಚ್ಚು ಮಂದಿಗೆ ಗಾಯ

ಶಿರಸಿ: ಇಲ್ಲಿನ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯ ಕೊಳಗಿಬೀಸ್ ಬಳಿ ಶುಕ್ರವಾರ ಸಂಜೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಭಟ್ಕಳದಿಂದ ಶಿರಸಿ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಶಿರಸಿಯಿಂದ ಕುಮಟಾ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ನಡುವೆ ಈ ಅಪಘಾತ ನಡೆದಿದೆ. ಕೊಳಗಿಬೀಸ್ ಬಳಿಯ ತಿರುವಿನಲ್ಲಿ ಚಾಲಕರ ಅಜಾಗರೂಕತೆಯ ಚಾಲನೆಯಿಂದಾಗಿ ವಾಹನಗಳು ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ […]

Share News

ಶಿರಸಿ: ಇಲ್ಲಿನ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯ ಕೊಳಗಿಬೀಸ್ ಬಳಿ ಶುಕ್ರವಾರ ಸಂಜೆ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ.

ಭಟ್ಕಳದಿಂದ ಶಿರಸಿ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಶಿರಸಿಯಿಂದ ಕುಮಟಾ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ನಡುವೆ ಈ ಅಪಘಾತ ನಡೆದಿದೆ. ಕೊಳಗಿಬೀಸ್ ಬಳಿಯ ತಿರುವಿನಲ್ಲಿ ಚಾಲಕರ ಅಜಾಗರೂಕತೆಯ ಚಾಲನೆಯಿಂದಾಗಿ ವಾಹನಗಳು ನಿಯಂತ್ರಣ ತಪ್ಪಿ ಪರಸ್ಪರ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಎರಡೂ ಬಸ್‌ಗಳ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಅಪಘಾತದಲ್ಲಿ ಗಾಯಗೊಂಡ 40ಕ್ಕೂ ಹೆಚ್ಚು ಜನರನ್ನು ತಕ್ಷಣವೇ ಸ್ಥಳೀಯರು ಮತ್ತು ಪೊಲೀಸರ ಸಹಾಯದಿಂದ ಶಿರಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಪೈಕಿ ಐವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಉಳಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆದ್ದಾರಿಯ ಮಧ್ಯಭಾಗದಲ್ಲೇ ಅಪಘಾತ ಸಂಭವಿಸಿದ್ದರಿಂದ ಶಿರಸಿ-ಕುಮಟಾ ನಡುವಿನ ಸಂಚಾರ ಸುಮಾರು ಎರಡು ಗಂಟೆಗಳ ಕಾಲ ಸಂಪೂರ್ಣ ಸ್ಥಗಿತಗೊಂಡಿತ್ತು. ನಂತರ ಪೊಲೀಸರು ಕ್ರೇನ್ ಮೂಲಕ ಜಖಂಗೊಂಡ ಬಸ್‌ಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಘಟನಾ ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Share News