ಮಂಗಳೂರು : ಕರಾವಳಿ ಕರ್ನಾಟಕದಲ್ಲಿ ಕಡಿಮೆ ಸಮಯದಲ್ಲಿ ಅತೀ ಹೆಚ್ಚು ಸುದ್ದಿ ಮಾಡಿ, ತನ್ನ ವಿಶೇಷ ಬೋಧನೆಯಿಂದ ಸಾವಿರಾರು ಭಕ್ತರನ್ನು ಒಂದೆಡೆ ಸೇರಿಸುವ ಮೂಲಕ ಖ್ಯಾತಿ ಪಡೆದಿದ್ದ ಕೇರಳ ಮೂಲದ ಸಜಿತ್ ಜೋಸೆಫ್ ಅವರನ್ನು ಕೇರಳದ ಸಿರಿಯನ್ ಕೆಥೋಲಿಕ್ ಮಲಬಾರ್ ಚರ್ಚ್ ಆಡಳಿತವು ದಿಢೀರ್ ಆಗಿ ಬೋಧಕ ಸ್ಥಾನದಿಂದ ತೆರವು ಮಾಡಿದ್ದು ಆತನನ್ನು ಯಾವುದೇ ಚರ್ಚ್ ಗಳಲ್ಲಿ ಪ್ರಾರ್ಥನೆಗೆ ಬಳಸಿಕೊಳ್ಳದಂತೆ ನಿಷೇಧ ವಿಧಿಸಿದೆ. ಜೊತೆಗೆ ಕರ್ನಾಟಕದಲ್ಲೂ ಕಥೋಲಿಕ ಕ್ರೈಸ್ತರ ಚರ್ಚ್‌ಗಳಲ್ಲಿ ಆತನಿಗೆ ನಿಷೇಧ ಹೇರಿದ್ದಾರೆ. ಸಿರಿಯನ್ ಕೆಥೋಲಿಕ್ ಮಲಬಾರ್ ಚರ್ಚ್ ಆಡಳಿತವು ಕಳೆದ ಅಕ್ಟೋಬರ್‌ನಲ್ಲಿ ಈ ಆದೇಶವನ್ನು ಮಾಡಿತ್ತು.

ಸಜಿತ್ ಜೋಸೆಫ್ ಕೇರಳದ ಆಲುವಾ ಜಿಲ್ಲೆಯ ಮೂಲದ ವ್ಯಕ್ತಿ ಎನ್ನಲಾಗುತ್ತಿದ್ದು ಕೇರಳ ಮತ್ತು ವಿದೇಶಗಳಲ್ಲಿ ತನ್ನದೇ ಆದ ಫಾಲೋವರ್ ಗಳನ್ನು ಹೊಂದಿದ್ದು ಜಾಲತಾಣದಲ್ಲಿಯೂ ಪ್ರಸಿದ್ದಿಯನ್ನು ಹೊಂದಿದ್ದಾರೆ. ಕೇರಳದ ವಿನ್ಸೆಂಟಿಯನ್ ಧಾರ್ಮಿಕ ಸಂಘದ ಚರ್ಚ್ ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೇರಳ ಕ್ರಿಸ್ತಿಯನ್ನರಿಗೆ ಕರಾವಳಿಯಲ್ಲಿ ಬೆಳ್ತಂಗಡಿ ಡಯಾಸಿಸ್ ಪ್ರಮುಖವಾಗಿದ್ದು ತೊಕ್ಕೊಟ್ಟಿನಲ್ಲಿ ಇವರ ಪಂಗಡಕ್ಕೆ ಡಿವೈನ್ ಪ್ರೇಯರ್ ಸೆಂಟರ್ ಅನ್ನುವ ಚರ್ಚ್ ಶಾಖೆ ಇದೆ.


ಸಜಿತ್ ಜೋಸೆಫ್ ಮಾತುಗಳಿಂದ ಪ್ರೇರಿತಗೊಂಡು ಮಂಗಳೂರಿನ ಕೊಂಕಣಿ ಕ್ಯಾಥೊಲಿಕ್ ಕ್ರಿಸ್ತರು ಕೂಡ ಅಲ್ಲಿಗೆ ತೆರಳುತ್ತಿದ್ದರು. ಪ್ರತಿ ತಿಂಗಳಲ್ಲಿ ಒಂದು ಶುಕ್ರವಾರ ಪ್ರಾರ್ಥನಾ ಸಭೆ ಇರುತ್ತಿತ್ತು. ಸಭೆಯಲ್ಲಿ 3-4 ಸಾವಿರ ಜನರು ಸೇರುತ್ತಿದ್ದರು. ಆದರೆ ಈ ನಡುವೆ, ಸಜಿತ್ ಜೋಸೆಫ್ ವಿರುದ್ಧ ಹಲವಾರು ದೂರುಗಳು ಕೇಳಿಬಂದಿದ್ದು ಚರ್ಚ್ ಆಡಳಿತಕ್ಕೂ ದೂರು ಹೋಗಿತ್ತು. ಇದರ ನಡುವೆಯೇ ಸಜಿತ್ ಹಿಂದೊಮ್ಮೆ ಮಾತನಾಡಿದ್ದು ಎನ್ನಲಾದ ವಿಡಿಯೋ ವೈರಲ್ ಆಗಿದ್ದು ಅದರಲ್ಲಿ ತಾನು ಹಿಂದೆ ಪ್ರೊಟೆಸ್ಟಂಟ್ ಆಗಿರುವುದು ಮತ್ತು ತನ್ನದೇ ಚರ್ಚ್ ಹೊಂದಿದ್ದ ವಿಚಾರವನ್ನು ಹೇಳಿದ್ದರು.

ಸಜಿತ್ ಜೋಸೆಫ್ ಕೆಥೋಲಿಕ್ ಅಲ್ಲ ಆತ ಒಬ್ಬ ಪ್ರೊಟೆಸ್ಟಂಟ್ ಕ್ರೈಸ್ತ ಎಂದು ಆಕ್ಷೇಪ ತೆಗೆದು ಚರ್ಚ್ ಆಡಳಿತಕ್ಕೆ ದೂರು ಹೇಳಿಕೊಂಡಿದ್ದರು. ಇದರ ಪರಿಣಾಮ ಕೇರಳದ ವಿನ್ಸೆಂಟಿಯನ್ ಧಾರ್ಮಿಕ ಸಂಘ, ಸಜಿತ್ ಜೋಸೆಫ್ ಅವರನ್ನು ಬೋಧಕ ಹುದ್ದೆಯಿಂದ ಹೊರಗೆ ಹಾಕಿದೆ.
ತೊಕ್ಕೊಟ್ಟು ಬೋಧನೆಯಲ್ಲಿ ಹಲವರಿಗೆ ಪರಿಹಾರ
ತಿಂಗಳ ಒಂದು ಶುಕ್ರವಾರ ಹಾಗೂ ಶನಿವಾರ ದಿನವಿಡೀ ತಿಕ್ಕೊಟ್ಟುವಿನ ಡಿವೈನ್ ರಿಟ್ರೀಟ್ ಸೆಂಟರ್‌ನಲ್ಲಿ ಆತನಿಂದ ಬೊಧನೆ ನಡೆಯುತ್ತಿತ್ತು. ಅಲ್ಲಿ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದರು. ಅದೇ ಕಾಲಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ದೇಶ-ವಿದೇಶದಲ್ಲಿ ವಾಸಿಸುವ ಭಕ್ತರು ಭಾಗವಹಿಸುತ್ತಿದ್ದರು. ಅಲ್ಲಿ ಭೇಟಿ ನೀಡಿ ಬೋಧನೆಯಲ್ಲಿ ಪಾಲ್ಗೊಂಡ ಕೆಲವರಿಗೆ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿತ್ತು ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ನಡೆಯಲೂ ಆಗದ ಕೆಲವರು ನಡೆಯುವಂತೆ ಮಾಡಿದ್ದಾರೆ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು. ಆದರೆ ಒಮ್ಮಿಂದೊಮ್ಮೆಲೆ ಸಜಿತ್ ತೊಕ್ಕೊಟ್ಟುವಿಗೆ ಬರುವುದನ್ನು ನಿಲ್ಲಿಸಿದ್ದರು. ಇದರಿಂದ ಹಲವು ಭಕ್ತರು ಗೊಂದಲಕ್ಕೆ ಒಳಗಾಗಿದ್ದರು. ಈ ಬಗ್ಗೆ ಅಲ್ಲಲ್ಲಿ ಚರ್ಚೆಗಳಾಗುತ್ತಿವೆ.
ಬಲ್ಲ ಮೂಲಗಳ ಪ್ರಕಾರ, ಸಜಿತ್ ಜೋಸೆಫ್ ಹೆತ್ತವರು ಕೇರಳದಲ್ಲಿ ರೋಮನ್ ಕೆಥೋಲಿಕ್ ಆಗಿದ್ದವರೇ. ಆದರೆ ಕೆಥೋಲಿಕ್ ಉಪದೇಶ, ನಂಬಿಕೆಗಳಿಗೆ ಹೊರತಾದ ಪ್ರೊಟೆಸ್ಟಂಟ್ ತತ್ವಗಳನ್ನು ನಂಬತೊಡಗಿದ್ದರು. ಇದರಿಂದಾಗಿ ಸಜಿತ್ ಜೋಸೆಫ್ ಅಸೆಂಬ್ಲಿ ಆಫ್ ಗಾಡ್ ಸಭೆಗೆ ಸೇರುವ “ಗ್ರೇಸ್ ಕಮ್ಯುನಿಟಿ ಗ್ಲೋಬಲ್” ಹೆಸರಿನಲ್ಲಿ 2011ರಲ್ಲಿ ಪ್ರತ್ಯೇಕ ಪ್ರಾರ್ಥನಾ ಕೇಂದ್ರ ಮಾಡಿಕೊಂಡಿದ್ದರು. ಇವರು ಬೇರೆ ಬೇರೆ ಕಡೆ ತೆರಳಿ ಪ್ರಾರ್ಥನೆ, ಸಭೆಗಳನ್ನೂ ನಡೆಸುತ್ತಿದ್ದರು. ಈ ಪಂಗಡದ ಜನರು ಮೂರ್ತಿಗಳನ್ನಿಟ್ಟು ಆರಾಧಿಸುತ್ತಿದ್ದುದಕ್ಕೆ ವಿರೋಧಿಸುತ್ತಿದ್ದರು.

2019ರಲ್ಲಿ ಸಜಿತ್ ಜೋಸೆಫ್ ಮತ್ತು ಆತನ ಜೊತೆಗಿದ್ದ 50ರಷ್ಟು ಜನರು ನಾವು ಮತ್ತೆ ಕೆಥೋಲಿಕ್ ಆಗಿರುತ್ತೇವೆಂದು ಹೇಳಿ ಚಾಲಕುಡಿಯ ವಿನ್ಸೆನ್ಶಿಯನ್ ಮಿಶನ್ ಸೆಂಟರ್ ನಲ್ಲಿ ಸೇರಿಕೊಂಡಿದ್ದರು. ಆನಂತರ, ಕೇರಳದ ಸಿರಿಯನ್ ಮಲಬಾರ್ ಪ್ರಾಂತ್ಯದ ಚರ್ಚುಗಳಲ್ಲಿ ಪ್ರಾರ್ಥನೆ, ಬೋಧನೆಗಳನ್ನು ಮಾಡತೊಡಗಿದ್ದರು. ಆದರೆ ಈಗ ಸಜಿತ್ ಬಗ್ಗೆ ದೂರುಗಳು ಕೇಳಿಬಂದಿದ್ದರಿಂದ ಚರ್ಚ್ ಆಡಳಿತವೇ ಇವರನ್ನು ಬೋಧಕ ಹುದ್ದೆಯಿಂದ ತೆಗೆದುಹಾಕಿದೆ. ದೇಶ- ವಿದೇಶಗಳಲ್ಲಿ ಬೋಧಕನಾಗಿದ್ದ ಸಜಿತ್ ಜೋಸೆಫ್ ಕೈಯನ್ನು ಕಟ್ಟಿಹಾಕಿದೆ.
ವಿನ್ಸೆಂಟಿಯನ್ ಚರ್ಚ್ ಆಡಳಿತವು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು ತಕ್ಷಣದಿಂದಲೇ ಅನ್ವಯವಾಗುವಂತೆ ಸಜಿತ್ ಜೋಸೆಫ್ ಪ್ರಾರ್ಥನೆ, ಬೋಧನೆಗೆ ನಿಷೇಧ ವಿಧಿಸಿದ್ದಾಗಿ ಹೇಳಿಕೊಂಡಿದೆ. “ಸಮುದಾಯದ ಅನೇಕರು, ಪ್ರಾರ್ಥನಾ ಕೇಂದ್ರದ ಪ್ರಮುಖರು ವಿಡಿಯೋ ಕ್ಲಿಪಿಂಗ್ ಜೊತೆಗೆ ದೂರು ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಜಿತ್ ಜೋಸೆಫ್ ಬೋಧನೆಯಲ್ಲಿ ಕೆಥೋಲಿಕ್ ಚರ್ಚ್ ಪ್ರವರ್ತಿಸುವ ಪವಿತ್ರ ವಿಧಿಗಳ ಕುರಿತು ತಪ್ಪು ಸಂದೇಶ ಇರುವುದನ್ನು ಗಮನಿಸಿದ್ದೇವೆ. ತನ್ನ ಬೋಧನೆಯಲ್ಲಿ ಹೊಸ ಮಾದರಿಯ ಮಾರ್ಸಿಯೋನಿಸಮ್ ಬಗ್ಗೆ ಪ್ರಮೋಟ್ ಮಾಡುತ್ತಿದ್ದು, ಇದನ್ನು ಚರ್ಚ್ ಫಾದರ್ ಗಳು ಒಕ್ಕೊರಲಿನಿಂದ ಖಂಡಿಸಿದ್ದಾರೆ.
ಜೀಸಸ್ ಮತ್ತು ಹೀಬ್ರೂ ಬೈಬಲ್ ನಡುವೆ ವ್ಯತ್ಯಾಸ ಇರೋದಾಗಿ ಹೇಳುತ್ತಿದ್ದು, ಜೀಸಸ್ ಬದಲು ತಂದೆಯನ್ನು ಪ್ರೀತಿಸುವಂತೆ ಆತನ ಬೋಧನೆಗಳಿವೆ. ಈ ವ್ಯಕ್ತಿ ಬೈಬಲಿನ ಹಳೆ ಒಡಂಬಡಿಕೆಯನ್ನು ತಪ್ಪಾಗಿ ಅರ್ಥೈಸಿದ್ದಾನೆ. ಈ ಬಗ್ಗೆ ಸೆ.25ರಂದು ಪ್ರೊವಿನ್ಶಿಯಲ್ ಕೌನ್ಸಿಲ್ ಸಭೆ ಕರೆದು ಸಜಿತ್ ಜೋಸೆಫ್ ವಿರುದ್ಧ ನಿರ್ಣಯ ಕೈಗೊಂಡಿದ್ದೇವೆ. ಹೀಗಾಗಿ ಆತನನ್ನು ಯಾವುದೇ ಚರ್ಚ್, ಪ್ರಾರ್ಥನಾ ಕೇಂದ್ರಗಳಲ್ಲಿ ಪ್ರಾರ್ಥನೆ, ಬೋಧನೆ ಅಥವಾ ಇನ್ಯಾವುದೇ ರೀತಿಯ ಧಾರ್ಮಿಕ ಕಾರ್ಯಗಳಿಗೆ ಕರೆಸುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದೆ

