ಮಂಗಳೂರು : ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಜನಪ್ರತಿನಿಧಿಗಳು ಚರ್ಚಿಸುವ ಸಂಧರ್ಭದಲ್ಲಿ ತುಳುಭಾಷೆ ಬಳಕೆ ಮಾಡುವುದಕ್ಕೆ ಕಾನೂನಿನ ನಿಯಾಮನುಸಾರ ಯಾವುದೇ ನಿರ್ಬಂಧ ಇರುವುದಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರತಿಕ್ರಿಯಿಸಿದ್ದಾರೆ.
ಕಾರ್ಕಳದ ಯಶಸ್ವಿ ನಾಗರಿಕ ಸೇವಾ ಸಂಘದ ಸಂಚಾಲಕ ಮುರಳೀಧರ ಎಂಬವರು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಮನವಿ ಸಲ್ಲಿಸಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಚರ್ಚಿಸುವಾಗ ತುಳು ಭಾಷೆ ಬಳಕೆ ಮಾಡದಂತೆ ಹಾಗೂ ಕನ್ನಡಕ್ಕೆ ಪ್ರಾಮುಖ್ಯತೆ ನೀಡುವಂತೆ ಆಗ್ರಹಿಸಿದ್ದರು. ಈ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ಆದರೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅವರು ಎಲ್ಲೂ ತಮ್ಮ ಪತ್ರದಲ್ಲಿ ತುಳು ಭಾಷೆಯನ್ನು ನಿರ್ಬಂಧಿಸಿ ಉಲ್ಲೇಖಿಸಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.
ನಿಯಾಮನುಸಾರ ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿರುವ ಪತ್ರವನ್ನು ಗಮನಿಸುವಾಗ ಗ್ರಾಮ ಪಂಚಾಯತ್ ಸಭೆಗಳಲ್ಲಿ ಜನಪ್ರತಿನಿಧಿಗಳು ಆಯಾ ಪ್ರದೇಶದ ಜನಾನುರಾಗಿ ಭಾಷೆಯನ್ನು ಬಳಕೆ ಮಾಡುವುದಕ್ಕೆ ಯಾವುದೇ ನಿರ್ಬಂಧ ಹಾಗೂ ತೊಡಕುಗಳಿರುವುದಿಲ್ಲ ಎಂಬುದನ್ನು ಸೂಚ್ಯವಾಗಿ ಉಲ್ಲೇಖಿಸುತ್ತದೆ. ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಪಂಚಾಯತ್ ಜನಪ್ರತಿನಿಧಿಗಳು ತಮ್ಮ ಪ್ರಾದೇಶಿಕ ವ್ಯಾಪ್ತಿಯ ಭಾಷೆಗಳನ್ನು ಬಳಸುವುದು ಸರ್ವೇ ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ಈ ಹಿನ್ನೆಲೆಯಲ್ಲಿ ತುಳು ಭಾಷೆ ಬಳಕೆಗೆ ಯಾವುದೇ ಅಡೆತಡೆಗಳಿರುವುದಿಲ್ಲ ಎಂಬುದನ್ನು ಗಮನಿಸಬೇಕಾಗಿದೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರ ಸೂಚನಾ ಪತ್ರವು ಇದೀಗ ಗೊಂದಲಕ್ಕೆ ಕಾರಣವಾಗುವುದರಿಂದ ಸದ್ರಿ ಪತ್ರವನ್ನು ವಾಪಾಸು ಪಡೆಯುವಂತೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಕೋರಿದ್ದಾರೆ.
ಎಲ್ಲಾ ಭಾಷೆ, ಸಾಂಸ್ಕ್ರತಿಕ ವೈವಿಧ್ಯತೆಗೆ ಗೌರವ ಕೊಡುವುದು ನಮ್ಮ ದೇಶದ ಪರಂಪರೆಯಾಗಿದೆ. ಜೊತೆಗೆ ಸಂವಿಧಾನದತ್ತ ಅವಕಾಶ ಕೂಡ ಆಗಿರುತ್ತದೆ ಎಂದು ಅಕಾಡೆಮಿ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.