ಮಂಗಳೂರು: ‘ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ ಬಿಜೆಪಿ ನಾಯಕರು ಹಿಂಸೆಗೆ ಪ್ರಚೋದನೆ ಕೊಡುವ ಹಾಗೂ ಪೊಲೀಸರ ಆತ್ಮಸ್ಥೈರ್ಯ ಕುಗ್ಗಿಸುವ ಮಾತುಗಳನ್ನು ಆಡಿದ್ದಾರೆ’ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ ಆರ್.ಪೂಜಾರಿ ಆರೋಪಿಸಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಯ್ಯದ್ ನಾಸಿರ್ ಹುಸೇನ್ ನೇತೃತ್ವದ ಕೆಪಿಸಿಸಿ ನಿಯೋಗವು ಜಿಲ್ಲೆಯ ಅಧಿಕಾರಿಗಳನ್ನು, ಧಾರ್ಮಿಕ ಮುಖಂಡರನ್ನು, ಸಂಘ ಸಂಸ್ಥೆಗಳನ್ನು, ಕಾರ್ಮಿಕ ವರ್ಗದವರನ್ನು ಭೇಟಿ ಮಾಡಿ ಸೌಹಾರ್ದ ಮೂಡಿಸುವ ಕ್ರಮಗಳ ಬಗ್ಗೆ ಚರ್ಚಿಸಿದರು.
ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಬಳಿ ಜಿಲ್ಲೆಯಲ್ಲಿ ಶಾಂತಿ ರಕ್ಷಣೆಗೆ ಕ್ರಮವಹಿಸಲು ಸೂಚಿಸಿದರು. ಆದರೆ ಬಿಜೆಪಿಯ ನಿಯೋಗದಲ್ಲಿದ್ದ ಮುಖಂಡರಿಗೆ ಸಾಮಾನ್ಯ ಪ್ರಜ್ಞೆ ಇರುತ್ತಿದಿದ್ದರೆ, ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಬೇಕಾದ ಸಂದೇಶ ನೀಡುತ್ತಿದ್ದರು. ಇದು ಎರಡೂ ಪಕ್ಷಗಳ ವೈಚಾರಿಕ ವ್ಯತ್ಯಾಸ’ ಎಂದರು.
‘ಮಹಾಕಾಳಿಪಡ್ಪು ರೈಲ್ವೆ ಕೆಳಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಬಜಪೆಯ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಕೊಲ್ಲಿ ರಾಷ್ಟ್ರಗಳ ವಿಮಾನ ಹೊರತಾಗಿ ಬೇರೆ ದೇಶಗಳ ವಿಮಾನ ಬರುವುದಿಲ್ಲ. ಇಲ್ಲಿಂದ ಸಿಂಗಪುರಕ್ಕೆ ನೇರ ವಿಮಾನಯಾನ ಆರಂಭಿಸುವ ಭರವಸೆಯೂ ಈಡೇರಿಲ್ಲ. ವಿಮಾನ ಟಿಕೆಟ್‌ಗೆ ಸರ್ಕಾರ ಗರಿಷ್ಠ ಮಿತಿ ನಿಗದಿಪಡಿಸಬೇಕೆಂಬ ಬೇಡಿಕೆಯೂ ಈಡೇರಿಲ್ಲ. ಕೂಳೂರು ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ’ ಎಂದು ಟೀಕಿಸಿದರು.
’ಶಾಸಕ ವೇದವ್ಯಾಸ ಕಾಮತ್ ಈಚೆಗೆ ಪೊಲೀಸ್ ಇಲಾಖೆಯ ಗಂಡಬೇರುಂಡ ಚಿಹ್ನೆ ತೆಗೆದು ಕಾಗೆ ಗುಬ್ಬಚ್ಚಿಯನ್ನು ಚಿಹ್ನೆ ಬಳಸಿ ಎಂದು ಹೇಳಿಕೆ ನೀಡಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿರುವ ಅವರ ಬಾಯಿಯಿಂದ ಇಂತಹ ಲಘು ಮಾತು ಬರಬಾರದಿತ್ತು.
ಶಾಸಕರು ಪೊಲಿಸರ ಮನೋಸ್ಥೈರ್ಯ ಕುಗ್ಗಿಸಬಾರದು. ದೇಶದಲ್ಲೇ ಕರ್ನಾಟಕ ಪೊಲಿಸರಿಗೆ ಗೌರವ ಇದೆ. ಇಲ್ಲಿನ ಪೊಲೀಸರ ಕ್ರಮದಿಂದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ಪ್ರಚೋದನೆಯ ಸಂದೇಶಗಳು ಗಣನೀಯವಾಗಿ ಕಡಿಮೆಯಾಗಿವೆ’ ಎಂದರು.
ಯಾವುದೇ ವ್ಯಕ್ತಿಗಳ ಮನೆಗೆ ಮಧ್ಯರಾತ್ರಿ ತೆರಳಿ ನೋಟಿಸ್ ನೀಡುವುದನ್ನು ಒಪ್ಪಲಾಗದು. ಈ ವಿಚಾರದಲ್ಲಿ ತಪ್ಪಾಗಿದ್ದರೆ ಪೊಲೀಸ್ ಅಧಿಕಾರಿಗಳ ಬಳಿ ಬಿಜೆಪಿ ಮುಖಂಡರು ಚರ್ಚಿಸಬಹುದಿತ್ತು’ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ನವೀನ್ ಡಿ ಸೌಝ, ಪ್ರಕಾಶ್ ಸಾಲಿಯಾನ್, ನಿರಾಜ್ ಚಂದ್ರ ಪಾಲ್, ಕೇಶವ ಮಾರೋಳಿ, ಲಾರೆನ್ಸ್ ಡಿ ಸೌಝ, ಸುಹಾನ್ ಆಳ್ವಾ, ಶುಭೋದಯ ಆಳ್ವಾ ಉಪಸ್ಥಿತರಿದ್ದರು.