ಮಂಗಳೂರು ಧರ್ಮಕ್ಷೇತ್ರದ ‘ಭರವಸೆಯ ಜುಬಿಲಿ ವರ್ಷ–2025’ ರ ಸಮಾರೋಪ ಸಮಾರಂಭವು ಇಂದು ಡಿಸೆಂಬರ್ 28ರಂದು ರವಿವಾರ ಮಂಗಳೂರಿನ ಅವರ್ ಲೇಡಿ ಆಫ್ ಹೋಲಿ ರೊಸಾರಿಯೊ ಕೆಥೆಡ್ರಲ್‌ನಲ್ಲಿ ಭಕ್ತಿಭಾವದಿಂದ ನೆರವೇರಿತು. ಪವಿತ್ರ ಕುಟುಂಬದ ಹಬ್ಬದ ದಿನದಂದೇ ಜುಬಿಲಿ ವರ್ಷದ ಸಮಾರೋಪ ವಿಧಿಗಳು ನಡೆದಿದ್ದು ವಿಶೇಷವಾಗಿತ್ತು.

ಸಮಾರೋಪ ಸಮಾರಂಭದಲ್ಲಿ ಜುಬಿಲಿಗೆ ಸಂಬಂಧಿಸಿದ ವಿಶೇಷ ವಿಧಿವಿಧಾನಗಳನ್ನು ಆಚರಿಸಲಾಯಿತು. ವರ್ಷಪೂರ್ತಿ ಬಲಿಪೀಠದ ಬಳಿ ಇರಿಸಲಾದ ಅಲಂಕೃತ ಜುಬಿಲಿ ಶಿಲುಬೆ ಸಮಾರಂಭದ ಕೇಂದ್ರ ಸಂಕೇತವಾಗಿತ್ತು. ಜುಬಿಲಿ ವರ್ಷದ ಆಧ್ಯಾತ್ಮಿಕ ಪಯಣವನ್ನು ಸ್ಮರಿಸಿ ಚರ್ಚ್ ಹಾಗೂ ವಿಶ್ವ ಶಾಂತಿಗಾಗಿ ವಿಶೇಷ ಸಾರ್ವತ್ರಿಕ ಪ್ರಾರ್ಥನೆ ಸಲ್ಲಿಸಲಾಯಿತು. ಜುಬಿಲಿ ವರ್ಷದ ದಾನ–ಧರ್ಮದ ಸಂಕೇತವಾಗಿ ಬಡವರಿಗಾಗಿ ಸಂಗ್ರಹಿಸಲಾದ ಕಾಣಿಕೆಗಳನ್ನು ದಿವ್ಯ ಬಲಿದಾನದ ವೇಳೆ ಅರ್ಪಿಸಲಾಯಿತು. ಇದೇ ಸಂದರ್ಭದಲ್ಲಿ, ಜುಬಿಲಿ ವರ್ಷದಲ್ಲಿ ದೊರೆತ ಕೃಪೆ ಹಾಗೂ ಪಾಪಕ್ಷಮೆಗಾಗಿ ಬಿಷಪ್ ಅವರ ನೇತೃತ್ವದಲ್ಲಿ ಇಡೀ ಸಭೆಯು ‘Te Deum’ ಕೃತಜ್ಞತಾ ಗೀತೆಯನ್ನು ಹಾಡಿತು.
ತಮ್ಮ ಪ್ರವಚನದಲ್ಲಿ ಧರ್ಮಾಧ್ಯಕ್ಷರು “ಜುಬಿಲಿ ವರ್ಷದ ಆಚರಣೆಗಳು ಇಂದು ಮುಕ್ತಾಯಗೊಂಡರೂ ನಮ್ಮೊಳಗಿನ ಭರವಸೆ ಎಂದಿಗೂ ಕೊನೆಗೊಳ್ಳಬಾರದು. ನಮ್ಮ ನಂಬಿಕೆ ನಮಗೆ ಸದಾ ಭರವಸೆಯ ದಾರಿ ತೋರಬೇಕು,” ಎಂದು ಹೇಳಿದರು. ಪ್ರತಿಯೊಂದು ಕುಟುಂಬವೂ ಕರುಣೆ, ದಯೆ, ನಮ್ರತೆ ಹಾಗೂ ತಾಳ್ಮೆಯ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅವರು ಹಿತವಚನ ನೀಡಿದರು.
ಜುಬಿಲಿ ವರ್ಷದ ಅಂಗವಾಗಿ ಧರ್ಮಕ್ಷೇತ್ರದ ಎಂಟು ಪುಣ್ಯಕ್ಷೇತ್ರಗಳಲ್ಲಿ ಭಕ್ತರಿಗೆ ಪಾಪಕ್ಷಮೆಯ ವಿಶೇಷ ಅವಕಾಶ ಕಲ್ಪಿಸಲಾಗಿತ್ತು. ಈ ಆಧ್ಯಾತ್ಮಿಕ ಅನುಭವದ ಬೆಳಕಿನಲ್ಲಿ ಭಕ್ತರು ತಮ್ಮ ದೈನಂದಿನ ಬದುಕಿನಲ್ಲಿ ಇತರರಿಗೆ ಭರವಸೆಯ ಸಾಕ್ಷಿಗಳಾಗಬೇಕು ಎಂದು ಬಿಷಪ್ ಅವರು ಕರೆ ನೀಡಿದರು. ಮಂಗಳ ಜ್ಯೋತಿ ನಿರ್ದೇಶಕರಾದ ವಂದನೀಯ ಫಾದರ್ ರೋಹಿತ್ ಡಿಕೋಸ್ಟಾ ಅವರು ದಿವ್ಯ ಬಲಿಪೂಜೆಯ ಸಂಪೂರ್ಣ ಕಾರ್ಯಕ್ರಮವನ್ನು ನಿರ್ವಹಿಸಿದರು.