ಮಂಗಳೂರು, ಡಿ.23 : 2025ನೇ ಜ್ಯೂಬಿಲಿ ವರ್ಷದ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಮಂಗಳೂರು ಕಥೊಲಿಕ್ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಮಾಜಕ್ಕೆ ಸತ್ಯ, ಪಾರದರ್ಶಕತೆ ಮತ್ತು ನೈತಿಕ ಜೀವನದ ಮಹತ್ವವನ್ನು ಸಾರುವ ಪ್ರೇರಣಾದಾಯಕ ಸಂದೇಶ ನೀಡಿದರು. ಮಂಗಳೂರಿನ ಕೊಡಿಯಾಲ್ ಬೈಲ್‌ನ ಬಿಷಪ್ ಹೌಸ್‌ನಲ್ಲಿ ಡಿ. 23ರಂದು ಆಯೋಜಿಸಲಾದ ಪತ್ರಕರ್ತರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸ್ನೇಹಕೂಟದಲ್ಲಿ ಅವರು ತಮ್ಮ ಕ್ರಿಸ್‌ಮಸ್ ಸಂದೇಶವನ್ನು ಹಂಚಿಕೊಂಡರು.

‘ಯೇಸು ಕ್ರಿಸ್ತರು ಲೋಕಕ್ಕೆ ತಂದ ಪ್ರೀತಿ, ಶಾಂತಿ ಮತ್ತು ಮಾನವೀಯತೆಯ ಸಂದೇಶವನ್ನು ಸ್ಮರಿಸಿದ ಧರ್ಮಾಧ್ಯಕ್ಷರು, ಇಂದಿನ ಸಮಾಜದಲ್ಲಿ ಸತ್ಯ ಮತ್ತು ನ್ಯಾಯದ ಮೌಲ್ಯಗಳನ್ನು ಮರುಸ್ಥಾಪಿಸುವುದು ಅತ್ಯವಶ್ಯಕ ಎಂದು ಅಭಿಪ್ರಾಯಪಟ್ಟರು. ಹಿಂಸೆ, ವಂಚನೆ, ತಪ್ಪು ಮಾಹಿತಿ ಮತ್ತು ಪರಸ್ಪರ ಅವಿಶ್ವಾಸ ದಿನೇ ದಿನೇ ಹೆಚ್ಚುತ್ತಿರುವ ಕುರಿತು ಅವರು ಕಳವಳ ವ್ಯಕ್ತಪಡಿಸಿದರು.
ಸಂದೇಶದ ಪ್ರಮುಖ ಅಂಶಗಳನ್ನು ವಿವರಿಸಿದ ಅವರು, ಸತ್ಯ, ಪಾರದರ್ಶಕತೆ ಮತ್ತು ನೈತಿಕತೆಯನ್ನು ರಕ್ಷಿಸುವುದು ಕೇವಲ ಕಾನೂನುಬದ್ಧ ಕರ್ತವ್ಯವಲ್ಲ, ಅದು ಸಮಾಜದ ಭವಿಷ್ಯದ ಅಡಿಗಲ್ಲು ಎಂದು ಹೇಳಿದರು. ವ್ಯಕ್ತಿಯ ಖಾಸಗಿತನ, ಗೌರವಯುತ ಜೀವನ ಮತ್ತು ಧಾರ್ಮಿಕ ಸ್ವಾತಂತ್ರ್ಯದಂತಹ ಮೂಲಭೂತ ಹಕ್ಕುಗಳು ಅಪಾಯದ ಅಂಚಿನಲ್ಲಿರುವುದನ್ನು ಸೂಚಿಸಿ, ಜನಪ್ರತಿನಿಧಿಗಳು, ಸರ್ಕಾರ ಮತ್ತು ಆಡಳಿತ ಸಂಸ್ಥೆಗಳು ಸತ್ಯನಿಷ್ಠ ಹಾಗೂ ಪಾರದರ್ಶಕ ಆಡಳಿತವನ್ನು ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಅಸತ್ಯ, ಭ್ರಷ್ಟಾಚಾರ ಮತ್ತು ಹಿಂಸೆಗೆ ಬದಲಾಗಿ ಸಂವಾದ, ಸಹಬಾಳ್ವೆ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದ ಧರ್ಮಾಧ್ಯಕ್ಷರು, ಜಾತಿ-ಧರ್ಮ-ಕುಲದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವ ಪ್ರವೃತ್ತಿ ನಿಲ್ಲಬೇಕು ಹಾಗೂ ಮುಗ್ಧ ಜನರನ್ನು ವಂಚಕರಿಂದ ರಕ್ಷಿಸಬೇಕು ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠ ಗುರು ವಂದನೀಯ ಮ್ಯಾಕ್ಸಿಮ್ ಎಲ್. ನೊರೊನ್ಹಾ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂದನೀಯ ಡಾ. ಜೆ.ಬಿ. ಸಲ್ದಾನ್ಹಾ ಹಾಗೂ ರೋಯ್ ಕ್ಯಾಸ್ಟೆಲಿನೋ, ಧರ್ಮಕ್ಷೇತ್ರದ ಪಾಲನಾ ಪರಿಷತ್ ಕಾರ್ಯದರ್ಶಿ ಡಾ| ಜಾನ್ ಡಿಸಿಲ್ವಾ, ಮಾಧ್ಯಮ ಪ್ರತಿನಿಧಿ ಎಲಿಯಾಸ್ ಫೆರ್ನಾಂಡಿಸ್, ಕೆನರಾ ಕಮ್ಯುನಿಕೇಶನ್ ಸೆಂಟರ್ ಇದರ ನಿರ್ದೇಶಕರಾದ ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್, ರಾಕ್ಣೊ ಸಂಪಾದಕ ವಂದನೀಯ ರೂಪೇಶ್ ಮಾಡ್ತ, ಎಸ್ಟೇಟ್ ಮ್ಯಾನೆಜರ್ ವಂದನೀಯ ಮ್ಯಾಕ್ಸಿಮ್ ರೊಸಾರಿಯೊ, ಧರ್ಮಾಧ್ಯಕ್ಷರ ಕಾರ್ಯದರ್ಶಿ ವಂದನೀಯ ಐವನ್ ಡಿಸೋಜಾ ಹಾಗೂ ಪ್ರೊಕ್ಯುರೇಟರ್ ವಂದನೀಯ ಜಗದೀಶ್ ಪಿಂಟೊ ಉಪಸ್ಥಿತರಿದ್ದರು.


