ಮಂಗಳೂರು,ಫೆ.23: ಮಂಗಳೂರು ಧರ್ಮಪ್ರಾಂತ್ಯದ ಕ್ಯಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ಮತ್ತು ಮಂಗಳೂರು ಧರ್ಮಪ್ರಾಂತ್ಯದ ಬೈಬಲ್ ಆಯೋಗದ ಸಹಯೋಗದೊಂದಿಗೆ ಕೊರ್ಡೆಲ್ ಹೋಲಿ ಕ್ರಾಸ್ ಚರ್ಚ್ ಮೈದಾನದಲ್ಲಿ ಫೆ. 26ರಿಂದ ಮಾ.1ರ ವರೆಗೆ ಬೃಹತ್ ಬೈಬಲ್ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ|ಡಾ| ಜೆ.ಬಿ. ಸಲ್ಡಾನ್ಹಾ ಹೇಳಿದರು.

ಸೋಮವಾರ ಧರ್ಮಾಧ್ಯಕ್ಷರ ನಿವಾಸದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, “ಕ್ರಿಸ್ತನ ವಾಕ್ಯವು ನಿಮ್ಮಲ್ಲಿ ನೆಲೆಸಿದೆ” ಎಂಬ ಧ್ಯೇಯದೊಂದಿಗೆ ಸಮ್ಮೇಳನ ಆಯೋಜಿಸಲಾಗಿದೆ. ಪ್ರತೀ ದಿನ ಸಂಜೆ 4ರಿಂದ 8:30ರವರೆಗೆ ಸಮ್ಮೇಳನ ನಡೆಯಲಿದೆ. ಇದೊಂದು ಬೈಬಲ್ ಹಬ್ಬ ಮತ್ತು ಬೈಬಲ್ ನಮಗೆ ನೀಡುವ ಸ್ಫೂರ್ತಿಯ ಸಂಕೇತ. ನಮ್ಮ ನಡುವೆ ನೆಲೆಸಿರುವ ದೇವರ ವಾಕ್ಯವನ್ನು ಆಚರಿಸುವುದು, ಸಂಭ್ರಮಿಸುವುದಾಗಿದೆ. ಪವಿತ್ರ ಬೈಬಲ್ ಜನರ ಮಧ್ಯದಲ್ಲಿ ದೇವರ ಉಪಸ್ಥಿತಿಯ ಕಥೆಯಾಗಿದೆ. ಈ ಬೈಬಲ್ ಸಮಾವೇಶ ದೈವಿಕ ಉಪಸ್ಥಿತಿಗಾಗಿ, ದೇವರ ವಾಕ್ಯಕ್ಕಾಗಿ, ನಮ್ಮ ಹಂಬಲವನ್ನು ವ್ಯಕ್ತಪಡಿಸುತ್ತದೆ. ಜನರ ಜೀವನದ ಹೋರಾಟಗಳಲ್ಲಿ, ಅವರ ಸುಖ-ದುಃಖಗಳಲ್ಲಿ ದೇವರು ಹೇಗೆ ಅವರೊಡನೆ ಸದಾ ಇದ್ದಾರೆ ಮತ್ತು ದೇವರಿಗೆ ಮೆಚ್ಚುಗೆಯಾಗುವ ಜೀವನವನ್ನು ರೂಪಿಸಿಕೊಳ್ಳಲು ದೇವರ ವಾಕ್ಯವು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಬೈಬಲ್‌ನ ಬೆಳಕಿನಲ್ಲಿ ವಿವರಿಸುವುದು ಇದರ ಗುರಿಯಾಗಿದೆ ಎಂದರು.
ಪ್ರತಿ ದಿನವೂ ಪವಿತ್ರ ಬಲಿಪೂಜೆ, ಜಪಮಾಲೆಯ ಧ್ಯಾನ, ಬೈಬಲ್‌ನ ಹಳೆ ಮತ್ತು ಹೊಸ ಒಡಂಬಡಿಕೆಯಿಂದ ‘ತಮ್ಮ ಜನರೊಡನೆ ದೇವರ ಉಪಸ್ಥಿತಿ’ಯ ಕುರಿತು ಆಯ್ದ ವಿಷಯಗಳ ಮೇಲೆ ಕೊಂಕಣಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಪ್ರವಚನಗಳು, ದಿವ್ಯಸಂಸ್ಕಾರದ ಆರಾಧನೆ, ಸ್ತುತಿ-ಆರಾಧನೆ ಮತ್ತು ಗುಣಪಡಿಸುವ ಪ್ರಾರ್ಥನೆಗಳನ್ನು ಒಳಗೊಂಡಿದೆ. ಎಂಟು ಮಂದಿ ಧರ್ಮಗುರುಗಳು ದೇವರ ವಾಕ್ಯವನ್ನು ಬೋಧಿಸಲಿದ್ದಾರೆ ಹಾಗೂ ನಾಲ್ಕು ಜನ ಧರ್ಮಗುರುಗಳು ಬೈಬಲ್ ಆಧಾರಿತ, ದಿವ್ಯಸಂಸ್ಕಾರದ ಆರಾಧನೆಯ ನೇತೃತ್ವ ವಹಿಸಲಿದ್ದಾರೆ ಎಂದರು.

ಧರ್ಮಪ್ರಾಂತ್ಯದ ಹಿರಿಯಗುರು ಮೊನ್ಸಿಂಜೊರ್ ವಂ| ಮ್ಯಾಕ್ಸಿಂ ಎಲ್. ನೊರೊನ್ಹಾ, ಸಾರ್ವಜನಿಕ ಸಂಪರ್ಕಾಧಿಕಾರಿ ರೋಯ್ ಕ್ಯಾಸ್ತಲಿನೊ, ಕಾರಿಸ್ಮಾತಿಕ್ ಸರ್ವಿಸ್ ಕಮ್ಯುನಿಯನ್ ನ ನಿರ್ದೇಶಕ ವಂ| ಕ್ಲಿಫರ್ಡ್ ಫೆರ್ನಾಂಡಿಸ್, ಸಂಯೋಜಕ ಡೋಲ್ಫಿ ಲೋಬೊ, ಬೈಬಲ್ ಆಯೋಗದ ಕಾರ್ಯದರ್ಶಿ ವಂ| ವಿನ್ಸೆಂಟ್ ಸಿಕ್ವೇರಾ, ಮಂಗಳ ಜ್ಯೋತಿ ಸಂಸ್ಥೆಯ ನಿರ್ದೇಶಕ ವಂ| ರೋಹಿತ್ ಡಿಕೋಸ್ತಾ, ಮಾಧ್ಯಮ ಸಂಯೋಜಕ ಎಲಿಯಾಸ್ ಫೆರ್ನಾಂಡಿಸ್ ಮತ್ತಿತರರು ಇದ್ದರು.




