ಬಂಟ್ವಾಳ: ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಸಂಚಾರ ನಿರ್ಬಂಧಿಸಿ ಬಂಟ್ವಾಳ ತಹಶಿಲ್ದಾರ್ ಅರ್ಚನಾ ಭಟ್ ಆದೇಶ ಹೊರಡಿಸಿದ್ದಾರೆ.
ಈ ಆದೇಶವನ್ನು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಕಟ್ಟುನಿಟ್ಟಾಗಿ ಪಾಲಿಸಲು ಸೂಕ್ತ ಕ್ರಮವಹಿಸುವುದು ಎಂದು ಅದೇಶದಲ್ಲಿ ಉಲ್ಲೇಖಿಸಲಾಗಿದೆ.
ವರದಿಯಲ್ಲಿ ಏನಿದೆ?
ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಗ್ರಾಮದಲ್ಲಿರುವ ನೇತ್ರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಹಳೆಯ ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು. ಸೇತುವೆಯಲ್ಲಿ ಈ ಹಿಂದೆ ಬಿರುಕು ಬಂದ ಹಿನ್ನಲೆಯಲ್ಲಿ ಸೇತುವೆಯ ಮೇಲೆ ಘನ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ಕಬ್ಬಿಣದ ಕಮಾನು ಅಳವಡಿಸಿ ಬಂದ್ ಮಾಡಲಾಗಿದ್ದು ಪ್ರಸ್ತುತ ಕಬ್ಬಿಣದ ಕಮಾನನ್ನು ಹಾನಿಗೊಳಿಸಿ ಘನವಾಹನಗಳು ಸಂಚರಿಸುತ್ತಿರುವುದು ವರದಿಯಾಗಿರುತ್ತದೆ
ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಸಂಚಾರಕ್ಕೆ ಅಪಾಯಕಾರಿಯಾಗಿರುವುದರಿಂದ ಅಲ್ಲದೆ ಸೇತುವೆಯ ಧಾರಣಾ ಸಾಮರ್ಥ್ಯದ ಕುರಿತು ಸಕ್ಷಮ ಇಲಾಖೆಯಿಂದ ವರದಿ ಬರುವವರೆಗೆ ಸೇತುವೆಯ ಮೇಲೆ ಸಂಚಾರ ಮಾಡುವುದನ್ನು ಅಪಾಯಕಾರಿ ಎಂದು ಪರಿಗಣಿಸಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ೨೦೦೫ರ ಕಲಂ ೬೮ ರ ಪ್ರಕಾರ ಈ ಅದೇಶ ಹೊರಡಿಸಿದೆ.
ಹಳೆಯ ಸೇತುವೆಯ ಮೇಲೆ ವಾಹನ ಸಂಚಾರ ಜನಸಂಚಾರ ಅಪಾಯಕಾರಿಯಾಗಿದ್ದು ಸೇತುವೆಯ ಧಾರಣ ಸಾಮರ್ಥ್ಯದ ಬಗ್ಗೆ ವರದಿ ನೀಡುವಂತೆ ತಹಶಿಲ್ದಾರ್ ಪುರಸಭೆಗೆ ಸೂಚನೆ ನೀಡಿದ್ದರು. ಆದರೆ ತಹಶಿಲ್ದಾರ್ ಅವರ ಸೂಚನೆಗೆ ಬೆಲೆ ನೀಡದ ಇಲಾಖೆ ಈವರೆಗೆ ವರದಿಯನ್ನು ನೀಡಿರಲಿಲ್ಲ.
ಪದೇ ಪದೇ ಏನಾದರೂ ಒಂದು ಸುದ್ದಿಯಾಗತ್ತಲೇ ಅಪಾಯಕಾರಿ ಸೇತುವೆಯಲ್ಲಿ ಘನ ವಾಹನಗಳು ಸಂಚಾರ ಮಾಡುವುದು ಮೇಲಾಧಿಕಾರಿಗಳ ಗಮನಕ್ಕೆ ಬಂದಿದೆ. ಹಾಗಾಗಿ ಸೇತುವೆ ಸುರಕ್ಷತೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮುಂದಿನ ನಿರ್ಧಾರ ಕೈಗೊಳ್ಳುವವರೆಗೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.