*ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತಂದರೆ ಹಕ್ಕುಚ್ಯುತಿ ಮಂಡಿಸುವುದು ಸಂಕುಚಿತ ಮನೋಭಾವ: ಬಿ. ರಮಾನಾಥ ರೈ ಅಸಮಾಧಾನ*
canaratvnews.com
ಮಂಗಳೂರು: ಕ್ಷೇತ್ರದ ಅಭಿವೃದ್ಧಿಗಾಗಿ ಮಾಜಿ ಸಚಿವನಾಗಿ ಉಸ್ತುವಾರಿ ಸಚಿವರ ಮೂಲಕ ಅನುದಾನ ತಂದಿರುವುದಕ್ಕೆ ವಿಧಾನಸಭೆಯಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ಹಕ್ಕುಚ್ಯುತಿ ಮಂಡಿಸಿರುವುದು ನನಗೆ ತೀವ್ರ ನೋವುಂಟು ಮಾಡಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಶುಕ್ರವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರುಮಾಜಿ ಸಚಿವರಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವುದು ಹೊಸತೇನಲ್ಲ. “ನಾನು ತರುವ ಯಾವುದೇ ಅನುದಾನ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿಯೇ ಹೊರತು ನನ್ನ ವೈಯಕ್ತಿಕಕ್ಕಲ್ಲ. ಜನರ ಬೇಡಿಕೆಗೆ ಸ್ಪಂದಿಸಿ ಸರ್ಕಾರದಿಂದ ಅನುದಾನ ಒದಗಿಸಲಾಗುತ್ತದೆ. ಅದರಲ್ಲೂ ಪರಿಶಿಷ್ಟ ಕಾಲನಿಗಳ ಅಭಿವೃದ್ಧಿಗೆ ತಂದ ಅನುದಾನವನ್ನೇ ಮುಂದಿಟ್ಟುಕೊಂಡು ಸದನದಲ್ಲಿ ಗಲಾಟೆ ಮಾಡಿ ಹಕ್ಕುಚ್ಯುತಿ ಮಂಡಿಸಿರುವುದು ಶಾಸಕರ ಸಂಕುಚಿತ ಮನೋಭಾವವನ್ನು ತೋರಿಸುತ್ತದೆ” ಎಂದು ಕಿಡಿಕಾರಿದರು.ಹಳೆಯ ದಿನಗಳನ್ನು ಸ್ಮರಿಸಿದ ಅವರು, “ಈ ಹಿಂದೆ ಸುಳ್ಯ ಕ್ಷೇತ್ರಕ್ಕೆ ನಾನು ಸಾಕಷ್ಟು ಅನುದಾನ ಒದಗಿಸಿದ್ದೆ, ಆದರೆ ಅಂದಿನ ಶಾಸಕ ಅಂಗಾರ ಅವರು ಎಂದೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಪ್ರಸ್ತುತ ಪ್ರತಿ ಶಾಸಕರಿಗೆ 10 ಕೋಟಿ ರೂ. ಅನುದಾನ ಲಭ್ಯವಿದ್ದು, ಅದನ್ನು ತಮ್ಮ ವಿವೇಚನೆಯಂತೆ ಬಳಸಬಹುದು. ಆದರೆ ರಾಜ್ಯ ಸರ್ಕಾರದ ಅನುದಾನದಡಿ ನಡೆಯುವ ಕಾಮಗಾರಿಗಳ ಕಟೌಟ್‌ನಲ್ಲಿ ಪ್ರಧಾನಿ ಮೋದಿ ಅವರ ಫೋಟೋ ಅಳವಡಿಸುವ ಅಗತ್ಯವೇನಿದೆ?” ಎಂದು ಪ್ರಶ್ನಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ ಹೆಗ್ಡೆ, ಮುಖಂಡರಾದ ಶುಭೋದಯ ಆಳ್ವ, ಅಪ್ಪಿ, ದಿನೇಶ್ ಕುಮಾರ್, ಸುಹಾನ್ ಆಳ್ವ, ರಮಾನಂದ ಪೂಜಾರಿ, ರಿಯಾಝ್, ಅಶೋಕ್ ಡಿ.ಕೆ., ಪ್ರೇಮಾನಂದ ಬಳ್ಳಾಲ್‌ಬಾಗ್, ವಿಕಾಸ್ ಶೆಟ್ಟಿ, ಶಬ್ಬಿರ್ ಸಿದ್ದಕಟ್ಟೆ ಮತ್ತಿತರರು ಉಪಸ್ಥಿತರಿದ್ದರು