ಚೆನ್ನೈ : ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ, ಆರು ವಿಧಾನಸಭಾ ಕ್ಷೇತ್ರಗಳಿಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಆದರೆ ತನ್ನ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ, ಆರು ವಿಧಾನಸಭಾ ಕ್ಷೇತ್ರಗಳಿಗೆ ಅಣ್ಣಾಮಲೈ ಅವರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಬರೀ, ಆರು ವಿಧಾನಸಭಾ ಕ್ಷೇತ್ರಗಳಿಗೆ ತಮ್ಮನ್ನು ಸೀಮಿತಗೊಳಿಸಿರುವುದು ಅವರ ಬೇಸರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ತಂದೆ ಕೊಯಂಬತ್ತೂರಿನಲ್ಲಿ ಇದ್ದಾರೆ, ಅವರ ಆರೋಗ್ಯ ಸರಿಯಿಲ್ಲ. ಓಡಾಡಲು ಕಷ್ಟವಾಗುತ್ತದೆ ಎನ್ನುವ ಕಾರಣವನ್ನು ಅಣ್ಣಮಲೈ ನೀಡಿದ್ದಾರೆ.
ಎಡಪ್ಪಾಡಿ ಪಳನಿಸ್ವಾಮಿಯವರ ಒತ್ತಡದಿಂದಾಗಿ, ಅವರು ತಮಿಳುನಾಡು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನದಿಂದ ಪದತ್ಯಾಗ ಮಾಡುವಂತಾಗಿತ್ತು. ಅವರ ಸ್ಥಾನಕ್ಕೆ ನೈನಾರ್ ರಾಜೇಂದ್ರನ್ ಅವರನ್ನು ಬಿಜೆಪಿ ನೇಮಿಸಿತ್ತು. ಆದಗ್ಯೂ, ಪಕ್ಷ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದರು.
ಕಳೆದ ವಾರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನೈನಾರ್ ರಾಜೇಂದ್ರನ್, ಅಣ್ಣಾಮಲೈ ಅವರನ್ನು ಕರೈಕುಡಿ, ಸಿಂಗನಲ್ಲೂರು, ಶ್ರೀವೈಕುಂಠಂ, ವಿರುಗಂಬಕ್ಕಂ, ಮಧುರೈ (ದಕ್ಷಿಣ) ಮತ್ತು ಪದ್ಮನಾಭಪುರಂ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಉಸ್ತುವಾರಿಯಾಗಿ ನೇಮಿಸಿದ್ದರು. ಇದು, ಅವರ ಕೋಪಕ್ಕೆ ಕಾರಣವಾಗಿತ್ತು.
“ನನ್ನ ತಂದೆ ಅನಾರೋಗ್ಯ ಪೀಡಿತರಾಗಿದ್ದಾರೆ, ಅವರನ್ನು ನೋಡಿಕೊಳ್ಳುವುದು ನನ್ನ ಮೊದಲ ಆದ್ಯತೆ. ಈ ಕಾರಣದಿಂದಾಗಿ, ನಾನು ಪ್ರಚಾರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ನೀವು ನನ್ನನ್ನು ಕೊಯಂಬತ್ತೂರು’ನಲ್ಲಿ ಹೆಚ್ಚಾಗಿ ನೋಡುತ್ತಿದ್ದೀರಿ” ಎಂದು ಅಣ್ಣಾಮಲೈ ಹೇಳಿದ್ದಾರೆ. ಏಪ್ರಿಲ್ ತಿಂಗಳಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ.