ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಹಾಗೂ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ. ಇದಾದ ಕೆಲವೇ ಹೊತ್ತಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಆತಂಕಕಾರಿ ಸಂಗತಿಯೊಂದು ಹರಿದಾಡುತ್ತಿದೆ. ‘ದುರಂತ ಸಂಭವಿಸುವ ಮೊದಲೇ ‘ವಿಕಿಪಿಡಿಯಾ’ದಲ್ಲಿ ಅಜಿತ್ ಅವರ ಸಾವಿನ ಮಾಹಿತಿ ಅಪ್‌ಡೇಟ್ ಆಗಿತ್ತು. ಹಾಗಾಗಿ, ಅಪಘಾತ ಸಂಭವಿಸಲಿದೆ ಎಂಬುದು ಗೊತ್ತಾಗಿತ್ತು ಅಥವಾ ಇದೊಂದು ಪಿತೂರಿ ಇದ್ದಿರಬಹುದು’ ಎಂದು ಆರೋಪಿಸಲಾಗುತ್ತಿದೆ.

ವಿಕಿಪಿಡಿಯಾದಲ್ಲಿರುವುದು ನಿಜವೇ?
ಅಜಿತ್ ಸಾವಿನ ದಿನಾಂಕವನ್ನು, ದುರಂತಕ್ಕೂ ಮೊದಲೇ ವಿಕಿಪಿಡಿಯಾದಲ್ಲಿ ಅಪ್‌ಡೇಟ್ ಮಾಡಲಾಗಿತ್ತು ಎಂಬುದು ನಿಜವಲ್ಲ. ಸಾರ್ವತ್ರಿಕ ಸಂಯೋಜಿತ ಸಮಯದ (UTC) ಟೈಮ್‌ಸ್ಟ್ಯಾಂಪ್ ಅನ್ನು ಸರಿಯಾಗಿ ಅರ್ಥೈಸಿಕೊಳ್ಳದ ಹಾಗೂ ದುರುದ್ದೇಶದಿಂದ ಎಡಿಟ್ ಮಾಡಿದ ಸ್ಕ್ರೀನ್‌ಶಾಟ್‌ಗಳನ್ನು ನೆಟ್ಟಿಗರು ಹಂಚಿಕೊಂಡಿರುವ ಕಾರಣ ಗೊಂದಲ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ. ವಿಕಿಪಿಡಿಯಾದಲ್ಲಿ ಭಾರತೀಯ ಪ್ರಮಾಣಿತ ಸಮಯ (IST) ಬದಲಾಗಿ ಯುಟಿಸಿ ಬಳಕೆ ಮಾಡಲಾಗುತ್ತದೆ.
ಅಜಿತ್ ಅವರಿದ್ದ ವಿಮಾನ ಜನವರಿ 28ರ ಬೆಳಿಗ್ಗೆ 8.50ಕ್ಕೆ ಪತನಗೊಂಡು ದುರಂತ ಸಂಭವಿಸಿತ್ತು. ಆದಾಗ್ಯೂ, ಅವರು ಮೃತಪಟ್ಟಿರುವುದು ಖಚಿತವಾದ ನಂತರವೇ ವಿಕಿಪಿಡಿಯಾದಲ್ಲಿ ಅಪ್‌ಡೇಟ್ ಮಾಡಲಾಗಿದೆ. ಅಂದರೆ, ಅಜಿತ್ ಅವರ ಹೆಸರಿನಲ್ಲಿರುವ ಪುಟ ಬೆಳಿಗ್ಗೆ 9.30ರ ಸುಮಾರಿಗೆ ಅಪ್‌ಡೇಟ್ ಆಗಿದೆ. ಭಾರತೀಯ ಕಾಲಮಾನವು ಯುಟಿಸಿಗಿಂತ ಸುಮಾರು 5 ಗಂಟೆ 30 ನಿಮಿಷ ಮುಂದೆ ಇದೆ. ಭಾರತೀಯ ಕಾಲಮಾನಕ್ಕಿಂತ ಹಿಂದೆ ಇರುವ ಪ್ರದೇಶ/ದೇಶದಿಂದ ಅಜಿತ್ ಅವರ ಪುಟ ಎಡಿಟ್ ಆಗಿರಬಹುದು.
ಹಾಗಾಗಿಯೇ, ವಿಕಿಪಿಡಿಯಾದ ಟೈಮ್ ಲಾಗ್‌ನಲ್ಲಿ ಅಪ್‌ಡೇಟ್ ಸಮಯ 4:00 am UTC ಎಂದು ಕಾಣುತ್ತಿದೆ. ಇದೇ ಕಾರಣದಿಂದಾಗಿ, ಆರಂಭದಲ್ಲಿ ಸಾವಿನ ದಿನಾಂಕ ‘ಜನವರಿ 27’ ಎಂದೇ ಕಾಣುತ್ತಿತ್ತು. ನಂತರ ಅದನ್ನು ಬದಲಿಸಲಾಗಿದೆ. ಈ ಕುರಿತು ಸರಿಯಾದ ತಿಳಿವಳಿಕೆ ಇಲ್ಲದ ಕೆಲವರು, ದುರಂತಕ್ಕೂ ಮೊದಲೇ ಮಾಹಿತಿ ಅಪ್‌ಡೇಟ್ ಮಾಡಲಾಗಿದೆ ಎಂಬ ತಪ್ಪು ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಸಾವಿನ ಸುದ್ದಿ ನಂತರವೇ ಅಪ್‌ಡೇಟ್ ಅಪಘಾತದ ಸುದ್ದಿ ಸಾರ್ವಜನಿಕವಾಗಿ ಪ್ರಕಟವಾದ ನಂತರವೇ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗಿದೆ. UTC ಟೈಮ್ ಸ್ಟ್ಯಾಂಪ್ ಬಳಕೆಯಿಂದಾಗಿ ಮೊದಲೇ ಅಪ್‌ಡೇಟ್ ಆಗಿರುವಂತೆ ಕಾಣುತ್ತಿದೆ ಎಂದು ಡಿಜಿಟಲ್ ವಿಶ್ಲೇಷಕರು ಖಚಿತಪಡಿಸಿದ್ದಾರೆ. ಗಣ್ಯರಿಗೆ ಸಂಬಂಧಿಸಿದ ವಿಚಾರಗಳಲ್ಲಿ ಈ ರೀತಿ ಆಗುವುದು ಸಾಮಾನ್ಯ ಎಂದೂ ಹೇಳಿದ್ದಾರೆ.
ಮುಕ್ತ ವೇದಿಕೆ ವಿಕಿಪಿಡಿಯಾ ಓಪನ್‌ಸೋರ್ಸ್ ವೇದಿಕೆಯಾಗಿದ್ದು, ತ್ವರಿತವಾಗಿ ಅಪ್‌ಡೇಟ್ ಆಗುತ್ತದೆ. ವಿಕಿಪಿಡಿಯಾದಲ್ಲಿ ಖಾತೆ ನೋಂದಾಯಿಸಿಕೊಳ್ಳುವ ಯಾವುದೇ ಬಳಕೆದಾರ ಮಾಹಿತಿಯನ್ನು ಅಪ್‌ಡೇಟ್ ಮಾಡಬಹುದು. ಪ್ರಮುಖ ಘಟನೆಗಳಾದಾಗ ಹಲವು ಬಳಕೆದಾರರು ಕೆಲವೇ ನಿಮಿಷಗಳಲ್ಲಿ ಮಾಹಿತಿಯನ್ನು ಅಪ್‌ಡೇಟ್ ಮಾಡುತ್ತಾರೆ. ಹೀಗಾಗಿ, ಟೈಮ್ ಸ್ಟ್ಯಾಂಪ್ ಆಗಾಗ್ಗೆ ಬದಲಾಗುತ್ತಿರುತ್ತವೆ.

