canaratvnews

ಬಸ್- ರಿಕ್ಷಾ ನಡುವೆ ಭೀಕರ ಅಪಘಾತ 6 ಮಂದಿ ದಾರುಣ ಸಾವು

ಮಂಗಳೂರು, ಆಗಸ್ಟ್ 28:ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ನಿಯಂತ್ರಣ ತಪ್ಪಿ ಬಸ್ ತಂಗುದಾಣ ಹಾಗೂ ಆಟೋ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ 6 ಜನ ಸ್ಥಳದಲ್ಲೇ ಸಾವನ್ನಪ್ಪಿದ್ದ ದುರಂತ ಘಟನೆ ಗುರುವಾರ ಮಧ್ಯಾಹ್ನ ತಲಪಾಡಿಯಲ್ಲಿ ಸಂಭವಿಸಿದೆ.
ಮಧ್ಯಾಹ್ನ 1.30 ರ ಸುಮಾರಿಗೆ ನಡೆದಿದೆ. ಕೆಸಿ ರೋಡ್‌ನಿಂದ ತೆರಳುತ್ತಿದ್ದ ಆಟೋ ರಿಕ್ಷಾ ಹಾಗೂ ಬಸ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಬಸ್ಸು ಇದ್ದಕಿದ್ದಂತೆ ಆಟೋಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಆಟೋ ನಜ್ಜುಗುಜ್ಜಾಗಿದೆ. ಈ ಸಂಬಂಧ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಆಟೋರಿಕ್ಷಾ ಚಾಲಕ ಹೈದರ್ ಅಲಿ (47), ಫರಂಗಿಪೇಟೆಯ ಅವ್ವಮ್ಮ, ಅಜ್ಜಿನಡ್ಕದ ಖತುಜಾ (60), ಹಸ್ನಾ, ನಫೀಸಾ (52), ಆಯೇಶಾ (19) ಎಂದು ಗುರುತಿಸಲಾಗಿದೆ. ಖತುಜಾ ಮತ್ತು ನಫೀಸಾ ಸಹೋದರಿಯರಾಗಿದ್ದರೆ, ಅವ್ವಮ್ಮ ನಫೀಸಾಳ ಚಿಕ್ಕಮ್ಮ. ಹಸ್ನಾ ಖತುಜಾ ಅವರ ಮಗಳು, ಮತ್ತು ಆಯೇಷಾ ನಫೀಸಾ ಅವರ ಮಗಳು. ಅಜ್ಜಿನಡ್ಕದ ಮುಳ್ಳುಗುಡ್ಡೆಯ ಈ ಕುಟುಂಬವು ಮಂಜೇಶ್ವರದ ಕುಂಜತ್ತೂರಿನಲ್ಲಿರುವ ಸಂಬಂಧಿಕರ ಮನೆಗೆ ತೆರಳುತ್ತಿದ್ದಾಗ ದುರಂತ ಸಂಭವಿಸಿದೆ.

ಸಾವನ್ನಪ್ಪಿದವರ ಜೊತೆಗೆ, ಇಬ್ಬರು ಪಾದಚಾರಿಗಳಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಲ್ಪಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News
Exit mobile version